ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು; ಮಾವ-ಸೊಸೆ ಸ್ಥಳದಲ್ಲೇ ಸಾವು..

Accident
Published on

ನೆಲಮಂಗಲ: ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಮಾವ-ಸೊಸೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಶಾಂತಿನಗರ ನಿವಾಸಿಗಳಾದ ಸೂರ್ಯಕಾಂತ್​ (45), ಗೀತಾ (35) ಮೃತಪಟ್ಟವರು. ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ-75 ಕುಣಿಗಲ್ ರಸ್ತೆಯ ಮಲ್ಲರಬಾಣವಾಡಿ ಬಳಿ ಈ ಅಪಘಾತ ಸಂಭವಿಸಿದೆ.

ಗುಲ್ಬರ್ಗ ಜಿಲ್ಲೆ ಮಾದಾಬಾ ಮೂಲದ ಸೂರ್ಯಕಾಂತ್ ನೆಲಮಂಗಲದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಟಿ. ಬೇಗೂರಿನಲ್ಲಿ ವಾಸವಿದ್ದರು. ತಮ್ಮ ಡ್ಯೂಟಿ ಮುಗಿದ ಬಳಿಕ ಶಾಂತಿ ನಗರದಲ್ಲಿ ವಾಸವಿದ್ದ ಸೊಸೆ ಗೀತಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಾಹನದಲ್ಲಿ ರಸ್ತೆ ದಾಟಲು ನಿಲ್ಲಿಸಿದ್ದಾಗ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದಿದೆ.

ಈ ಹೆದ್ದಾರಿಯಲ್ಲಿ ಪದೇಪದೆ ಅಪಘಾತಗಳು ಸಂಭವಿಸುತ್ತಿದ್ದರೂ ಸುರಕ್ಷತಾ ಕ್ರಮ ವಹಿಸಬೇಕಾದ ಲ್ಯಾಂಕೋ ದೇವಿ ಟೋಲ್ ಕಂಪನಿಯವರು ಯಾವುದೇ ಸರ್ವೀಸ್ ರಸ್ತೆ, ಲೈಟ್ ಮತ್ತು ಸೂಚನಾ ಫಲಕಗಳನ್ನ ಅಳವಡಿಸಿಲ್ಲ ಎಂದು ಟೋಲ್ ಕಂಪನಿ ವಿರುದ್ಧ ಆಕ್ರೋಶಗೊಂಡ ಸ್ಥಳೀಯರು ರಸ್ತೆತಡೆ ನಡೆಸಲು ಮುಂದಾಗಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಗ್ರಾಮಾಂತರ ಮತ್ತು ಸಂಚಾರಿ ಪೊಲೀಸರು ಸ್ಥಳೀಯರ ಮನವೊಲಿಸಿ, ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net