ಕುರ್ಚಿಗೆ ಇಬ್ಬರು ಅಧಿಕಾರಿಗಳ ಜಟಾಪಟಿ

ಕುರ್ಚಿಗೆ ಇಬ್ಬರು ಅಧಿಕಾರಿಗಳ ಜಟಾಪಟಿ
Published on

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಕುರ್ಚಿಗೆ ಇಬ್ಬರು ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ನೆರೆದಿದ್ದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಈ ಬೆಳವಣಿಗೆಗೆ ಸಾಕ್ಷಿಯಾದರು.

ಪ.ಪಂ.ನಲ್ಲಿ ಈ ಹಿಂದೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರ್ತಿ ಅವರು ಪ್ರಕರಣವೊಂದರಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನಲೆ ಜಿಲ್ಲಾಧಿಕಾರಿ ಅವರು 2023, ಡಿ.14 ರಂದು ಕಡ್ಡಾಯ ನಿವೃತ್ತಿಗೆ ಆದೇಶ ಹೊರಡಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದರು. ಈ ಆದೇಶದ ವಿರುದ್ಧ ಮೂರ್ತಿ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿ ಕರ್ತವ್ಯದ ಮರು ನೇಮಕಕ್ಕೆ ಆದೇಶಿಸಿತ್ತು. ಜತೆಗೆ ಇವರಿಗೆ ಬರಬೇಕಿದ್ದ ವೇತನ ಬಾಕಿ, ಸೇವೆಯ ನಿರಂತರತೆ ಹಾಗೂ ಸಿಗಬೇಕಾದ ಎಲ್ಲಾ ಪ್ರಯೋಜನಗಳನ್ನು 4 ವಾರದೊಳಗೆ ಅನುಷ್ಟಾನಗೊಳಿಸಲು ಆದೇಶಿಸಿದೆ.

ಈ ಹಿನ್ನೆಲೆ ಮೂರ್ತಿ ಅವರು ಕರ್ತವ್ಯಕ್ಕೆ ಅವಕಾಶ ಮಾಡಿಕೊಡುವಂತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಿ ಮಂಗಳವಾರ ಕರ್ತವ್ಯಕ್ಕೆ ಹಾಜರಾಗಲು ಪಪಂ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಹಾಲಿ ಮುಖ್ಯಾಧಿಕಾರಿ ಅಶೋಕ್ ಅವರಲ್ಲಿ ಈ ಬಗ್ಗೆ ಕೇಳಿಕೊಂಡರು. ಆದರೆ, ಇದಕ್ಕೊಪ್ಪದ ಅಶೋಕ್ ಜಿಲ್ಲಾಧಿಕಾರಿ ಅವರಿಂದ ಅಧಿಕೃತ ಆದೇಶ ಪತ್ರವಿಲ್ಲದೆ ಈ ರೀತಿ ಕಚೇರಿಗೆ ಆಗಮಿಸಿರುವುದು ಕಾನೂನು ಬಾಹಿರ. ಹಾಗಾಗಿ ಡಿಸಿ ಅವರಿಂದ ಆದೇಶ ಪತ್ರ ಪಡೆದು ಕಚೇರಿಗೆ ಆಗಮಿಸಿ ಎಂದು ತಿಳಿಸಿದರು. ಈ ವೇಳೆ ಇಬ್ಬರ ನಡುವೆ ಅಧಿಕಾರಕ್ಕಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ತೀವ್ರ ವಾಗ್ವಾದವೇ ನಡೆಯಿತು. ಮೂರ್ತಿ ಅವರು ಕರ್ತವ್ಯಕ್ಕಾಗಿ ಪಟ್ಟುಹಿಡಿದು ಕುಳಿತಿದ್ದರು. ಇದರಿಂದ ನೆರೆದಿದ್ದ ಸಾರ್ವಜನಿಕರು ಹಾಗೂ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸ್ವಾರಸ್ಯಕರ ಘಟನೆಯನ್ನು ತಿಳಿದು ಸಾರ್ವಜನಿಕರು ಕುತೂಹಲದಿಂದ ಕಚೇರಿಯತ್ತ ಜಮಾಯಿಸಿದ್ದರು. ಬಳಿಕ ಮೂರ್ತಿ ಅವರು ಜಿಲ್ಲಾಧಿಕಾರಿ ಅವರಿಂದ ಆದೇಶ ಪತ್ರ ಪಡೆಯಲು ತೆರಳಿದರು.

ದೂರಿಗೆ ಆಕ್ಷೇಪ: ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಸಂದರ್ಭದಲ್ಲೇ ನಗಾರಾಭಿವೃದ್ಧಿ ಯೋಜನಾಧಿಕಾರಿ ಸುಧಾ, ಅಶೋಕ್ ಅವರಿಗೆ ಕರೆಮಾಡಿ ಮೂರ್ತಿ ಅವರು ಕರ್ತವ್ಯಕ್ಕೆ ನೇಮಕ ಸಂಬಂಧ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಈ ಸಂಬಂಧ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದರು. ಈ ಸಂದರ್ಭ ಸಾರ್ವಜನಿಕರು ಹಾಗೂ ಕೆಲ ಸದಸ್ಯರು ಅಶೋಕ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಕಚೇರಿಯಲ್ಲಿ ಕಿತ್ತಾಡಿಕೊಂಡಿರುವುದರ ಬಗ್ಗೆ ಪಟ್ಟಣದ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net