

ಬಾಗಲಕೋಟೆ: ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಅಕ್ಕ-ತಮ್ಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಕಂದಗಲ್ಲ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಗೀತಾ ಈಶ್ವರಯ್ಯ ಆದಾಪುರಮಠ(14) ಹಾಗೂ ಆಕೆಯ ಸಹೋದರ ರುದ್ರಯ್ಯ(10) ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮನೆಯಲ್ಲಿ ಅಜ್ಜ-ಅಜ್ಜಿಯ ಜೊತೆಗೆ ಗೀತಾ ಹಾಗೂ ಆಕೆಯ ಸಹೋದರ ವಾಸಿಸುತ್ತಿದ್ದರು. ಮನೆಯ ಮೇಲ್ಛಾವಣಿ ಕುಸಿದು ಬೀಳುವುದಕ್ಕೂ ಮುನ್ನ ಅಜ್ಜ ಹಾಗೂ ಅಜ್ಜಿ ಮನೆಯಿಂದ ಹೊರಬಂದಿದ್ದಾರೆ. ಗೀತಾ ಹಾಗೂ ಆಕೆಯ ಸಹೋದರ ಮೊಬೈಲ್ ಬಳಸುತ್ತಾ ಮನೆಯೊಳಗೆ ಕುಳಿತಿದ್ದರು.
ಈ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಮಣ್ಣಿನಡಿ ಸಿಲುಕಿದ್ದ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಅಧಿಕಾರಿಗಖು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೀತಾ ಹಾಗೂ ರುದ್ರಯ್ಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಇಂದು (ಮೇ 31) ಶಾಲೆಯ ಮೊದಲ ದಿನವಾದ್ದರಿಂದ ಸ್ಕೂಲ್ಗೆ ತೆರಳುವಂತೆ ಪೋಷಕರು ಸೂಚಿಸಿದ್ದರು. ಮೊದಲ ದಿನವಾದ್ದರಿಂದ ಅಕ್ಕ-ತಮ್ಮ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದರು. ಆದರೆ, ಮೇಲ್ಛಾವಣೆ ಮಣ್ಣಿನ ರೂಪದಲ್ಲಿ ಬಂದ ಜವರಾಯ ಇಬ್ಬರನ್ನು ಬಲಿ ಪಡೆದಿದ್ದಾನೆ.