

ಸಾಲಿಗ್ರಾಮ: ತಾಲೂಕಿನ ಬೈಲಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ.
ಮಹಮ್ಮದ್ ಖಲೀಲ್ ರೆಹಮಾನ್(60), ಶೇಕ್ ಅಬ್ದುಲ್ಲಾ ಖಾದರ್(45) ಮೃತರು. ಶೇಕ್ ಮುನೀರ್ ಅಹಮದ್(43) ಗಾಯಗೊಂಡವರು. ಚುಂಚನಕಟ್ಟೆ ಸಂತೆಯಲ್ಲಿ ಬಕ್ರೀದ್ ಹಬ್ಬಕ್ಕೆ ಕುರಿಗಳನ್ನು ಖರೀದಿಸಲು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಹಾಸನದ ಲಕ್ಷ್ಮೀಪುರಂ ಬಡಾವಣೆ ನಿವಾಸಿ ಮಹಮ್ಮದ್ ಖಲೀಲ್ ರೆಹಮಾನ್, ಶೇಕ್ ಅಬ್ದುಲ್ಲಾ ಖಾದರ್, ಶೇಕ್ ಮುನೀರ್ ಅಹಮದ್ ಓಮ್ನಿ ವಾಹನದಲ್ಲಿ ಬುಧವಾರ ತೆರಳುತ್ತಿದ್ದರು. ಬೈಲಾಪುರದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಪಕ್ಕದ ಜಮೀನಿನವರು ಪೈಪು ಹಾಕಲು ಗುಂಡಿ ತೆಗೆದಿದ್ದರು. ಚಾಲಕ ಶೇಕ್ ಅಬ್ದುಲ್ಲಾ ಖಾದರ್ ಗುಂಡಿ ತಪ್ಪಿಸಲು ಮುಂದಾದಾಗ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಅಪಘಾತದಿಂದ ಮಹಮ್ಮದ್ ಖಲೀಲ್ ರೆಹಮಾನ್, ಅಬ್ದುಲ್ಲಾ ಖಾದರ್ ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡ ಶೇಕ್ ಮುನೀರ್ ಅಹಮದ್ ಅವರನ್ನು ಕೆ.ಆರ್.ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.