ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿ ತಿಪ್ಪಗಾನಹಳ್ಳಿ ಬಳಿ ಭಾನುವಾರ ಗೌರಿಬಿದನೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಹೆಬ್ಬಾಳ ನಿವಾಸಿಗಳಾದ ಸುದರ್ಶನ್ (40), ಮಹಮ್ಮದ್ ರಾಜಿಕ್(28) ಮೃತರು. ಕುಡುಮಲಕುಂಟೆ ಬಳಿಯ ಜಮೀನಿನಲ್ಲಿ ಶೆಡ್ ಕಾಮಗಾರಿ ಕೆಲಸ ಮುಗಿಸಿ, ಮೂವರು ಸ್ನೇಹಿತರೊಂದಿಗೆ ಬೆಂಗಳೂರಿಗೆ ವಾಪಸ್ ಬರಬೇಕಾದರೆ ನಾಯಿ ಅಡ್ಡ ಬಂದ ಕಾರಣ ವೇಗವಾಗಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ, ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದಿಲ್ ಪಾಷಾ ಮತ್ತು ರಾಜು ಸ್ಥಿತಿ ಗಂಭೀರವಾಗಿದೆ. ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೃತ ಸುದರ್ಶನ್ ತಂದೆ ಸಂಗಪ್ಪ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.