

ರಾಮನಗರ: ಟಿವಿಎಸ್ ಎಕ್ಸೆಲ್ ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟು ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅಚ್ಚಲುದೊಡ್ಡಿ ಬಳಿ ನಡೆದಿದೆ.
ತಮಿಳುನಾಡು ಡೆಂಕಣಿ ಕೋಟೆ ಬೋಕಸಂದ್ರದ ಭವ್ಯ(3) ಮತ್ತು ಪ್ರದೀಪ್( 5) ಮೃತ ಮಕ್ಕಳು.
ಮೃತರ ತಂದೆ ಭೈರಪ್ಪ ಮತ್ತು ತಾಯಿ ಬ್ಯಾಲಾಳಮ್ಮ ರಾಮನಗರ ತಾಲೂಕು ಲಕ್ಕಪ್ಪನಹಳ್ಳಿಯ ಕೋಳಿ ಫಾರಂ ಒಂದರಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರು.
ಅಚ್ಚಲುದೊಡ್ಡಿ ಕಾಲೋನಿಯಲ್ಲಿ ಇರುವ ತಮ್ಮ ಸಂಬಂಧಿ ಗೋವಿಂದ ಅವರ ಮನೆಗೆ ತಮ್ಮ ಇಬ್ಬರು ಮಕ್ಕಳನ್ನು ಗೋವಿಂದ ಮತ್ತು ಮಧು ಎನ್ನುವರ ಜತೆಗೆ ಕಳುಹಿಸಿದ್ದಾರೆ. ಈ ವೇಳೆ ಮೊಟ್ಟೆ ದೊಡ್ಡಿಯಿಂದ ಅಚ್ಚಲು ಕಡೆಗೆ ಬರುವ ವೇಳೆ ರಾಮನಗರದಿಂದ ಕನಕಪುರಕ್ಕೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ತಿರುವಿನಲ್ಲಿ ಟಿವಿಎಸ್ ಎಕ್ಸ್ ಎಲ್ ಗೆ ಡಿಕ್ಕಿಯೊಡೆದಿದೆ.
.ಡಿಕ್ಕಿಯ ರಭಸಕ್ಕೆ ಸ್ಕೂಟರ್ ಮುಂಭಾಗದಲ್ಲಿ ಕುಳಿತಿದ್ದ ಮಕ್ಕಳಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಧುಗೆ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಗೋವಿಂದನಿಗೆ ರಾಮನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.