

ಬೆಂಗಳೂರು: ಗಮನವನ್ನು ಬೇರೆಡೆ ಸೆಳೆದು ವಾಹನಗಳಲ್ಲಿರುವ ಹಣವನ್ನು ಕಳವು ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿ 13.97 ಲಕ್ಷ ರೂ. ನಗದು ಮತ್ತು ಕೃತ್ಯಕ್ಕೆ ಉಪಯೊಗಿಸುತ್ತಿದ್ದ ಕಾರು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಚೆನ್ನೈ ಮೂಲದ ಕಾರ್ತಿಕ್ (37), ಅನುಮೋದಾಸ್(44) ಬಂಧಿತರು. ಜೂ.2 ರಂದು ಚೇತನ್ ಎಂಬುವರು ತಮ್ಮ ಟಯೋಟಾ ಇನ್ನೋವಾ ಕಾರಿನಲ್ಲಿ ಇಟ್ಟಿದ್ದ 15 ಲಕ್ಷ ರೂ. ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ರಾಜರಾಜೇಶ್ವರಿನಗರ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ 13.97 ಲಕ್ಷ ರೂ. ನಗದು ಮತ್ತು ಕೃತ್ಯಕ್ಕೆ ಉಪಯೊಗಿಸುತ್ತಿದ್ದ ಎರಿಟಿಗಾ ಕಾರು, ಒಂದು ಅಪಾಚೆ ಹಾಗೂ ಒಂದು ಹೊಂಡಾ ಹಾರ್ನೆಟ್ ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನಗರದ ರಾಜರಾಜೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆಯೂ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಹಾಗೂ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯು ಸಹ ಇದೇ ರೀತಿ ಕಳವು ಮಾಡಿರುವ ಬಗ್ಗೆ ತನಿಖೆಯಿಂದ ತಿಳಿದು ಬೆಳಕಿಗೆ ಬಂದಿದೆ. ಈ ಪ್ರಕರಣದ ಭಾಗಿಯಾಗಿದ್ದ ಉಳಿದ ಅರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.