

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಅಡೇಕಲ್ ಪೆರಾಬೆ ಎಂಬಲ್ಲಿ ಬುಧವಾರ ಮಧ್ಯಾಹ್ನ ಸಿಡಿಲಿಗೆ ಎರಡು ಮನೆಗಳು ಭಾಗಶಃ ಹಾನಿಗೀಡಾಗಿವೆ. ಇವುಗಳ ಪೈಕಿ, ಒಂದರ ಗೃಹಪ್ರವೇಶ ಬೆಳಗ್ಗೆಯಷ್ಟೇ ಆಗಿತ್ತು.
ಘಟನೆಯಲ್ಲಿ ಓರ್ವ ಗಾಯಗೊಂಡು ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಪೆರಾಬೆಯ ನಿವಾಸಿ ಬಿ.ಟಿ.ಸಂಶುದ್ದೀನ್ ಎಂಬವರ ಮನೆ ಮತ್ತು ಅವರ ಸಹೋದರ ಬಿ.ಟಿ. ಕರೀಂ ಎಂಬವರ ಮನೆಗೆ ಸಿಡಿಲು ಬಡಿದಿದೆ. ಈ ವೇಳೆ ವರಾಂಡದಲ್ಲಿ ಇದ್ದ ಸಂಶುದ್ದೀನ್ ಎಂಬವರ ಕೈಗಳಿಗೆ ಗಾಯವಾಗಿದೆ. ಇನ್ನೊಂದು ಕೊಠಡಿಯಲ್ಲಿದ್ದ ಅವರ ತಾಯಿ, ಪತ್ನಿ ಹಾಗೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸಂಶುದ್ದೀನ್ ಸಹೋದರ ಬಿ.ಟಿ ಕರೀಂ ಅವರ ಮನೆಗೆ ಬೀಗ ಹಾಕಿದ್ದು, ಯಾರೂ ಇಲ್ಲದಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಸಿಡಿಲಿನ ಭೀಕರತೆಗೆ ಬಿ.ಟಿ ಸಂಶುದ್ದೀನ್ ಅವರ ಹೊಸ ಮನೆಯ ಗೋಡೆ ಹಾಗೂ ನೆಲ ಬಿರುಕು ಬಿಟ್ಟಿದ್ದು, ಮನೆಯ ವಯರಿಂಗ್ ಸುಟ್ಟಿದೆ. ಇಂದೇ ಬೆಳಗ್ಗೆ ನೂತನ ನಿವಾಸದ ಪ್ರವೇಶ ಕಾರ್ಯಕ್ರಮ ನಡೆದಿತ್ತು.
ಕರಾವಳಿಯಲ್ಲಿ ಬುಧವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಉತ್ತಮ ಮುಂಗಾರು ಪ್ರವೇಶದ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಆರು ದಿನಗಳ ಕಾಲ (ಜೂ.7ರಿಂದ 10)ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನವರೆಗೆ ಮಂಗಳೂರು ಹಾಗೂ ಉಳ್ಳಾಲದಲ್ಲಿ ತಲಾ 3.8 ಮಿ.ಮೀಟರ್ ಗರಿಷ್ಠ ಮಳೆ ದಾಖಲಾಗಿದೆ. ಬೆಳ್ತಂಗಡಿ 2.8 ಮಿ.ಮೀ, ಬಂಟ್ವಾಳ 1.5, ಪುತ್ತೂರು 2.8, ಸುಳ್ಯ 3.4, ಮೂಡುಬಿದಿರೆ 1.2, ಕಡಬ 3.7, ಮೂಲ್ಕಿ 34 ಹಾಗೂ ಉಳ್ಳಾಲ 3.8 ಮಳೆಯಾಗಿದ್ದು, ದಿನದ ಸರಾಸರಿ ಮಳೆ 2.9 ಮಿ.ಮೀ.ದಾಖಲಾಗಿದೆ.