

ಗೌರಿಬಿದನೂರು: ತಾಲೂಕಿನ ದಂಡಿಗಾನಹಳ್ಳಿ ಜಲಾಶಯದಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದ ಮುಂಬೈ ಮೂಲದ ಇಬ್ಬರು ಬಾಲಕಿಯರು ಶನಿವಾರ ಸಂಜೆ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮುಂಬೈ ನಗರದ ಮೀರಾ ರಸ್ತೆಯ ಜೋಯ ಪಾಟೀಲ್(14) ಹಾಗೂ ದೈಸರ್ ಖಾಂದರ್ ಪಾಡ ಪ್ರದೇಶದ ಅಲಿಯಾ ಪಾಟೀಲ್(14) ಮೃತ ಬಾಲಕಿಯರು.
ಸಹೋದರ ಸಂಬಂಧಿಗಳಾದ ಜೋಯ ಹಾಗೂ ಅಲಿಯಾ ಇಬ್ಬರೂ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೇಸಿಗೆ ರಜೆ ಹಿನ್ನೆಲೆಯಲ್ಲಿ ಗೌರಿಬಿದನೂರಿನ ಮರಿಯಪ್ಪನಪಾಳ್ಯದಲ್ಲಿನ ಸಂಬಂಧಿ ಶಬ್ಬೀರ್ ಅಹಮದ್ ಮನೆಗೆ ಬಂದಿದ್ದರು. ಶನಿವಾರ ಶಬ್ಬೀರ್ ಅಹಮದ್ ಜತೆಗೂಡಿ ಜೋಯ ಹಾಗೂ ಅಲಿಯಾ ಸೇರಿ 8 ಮಕ್ಕಳು ದಂಡಿಗಾನಹಳ್ಳಿ ಜಲಾಶಯಕ್ಕೆ ಪ್ರವಾಸಕ್ಕೆಂದು ತೆರಳಿದ್ದು, ನೀರಿನಲ್ಲಿ ಆಟ ಆಡುವಾಗ ಜೋಯ ಹಾಗೂ ಅಲಿಯಾ ನೀರಿನಲ್ಲಿ ಮುಳುಗುತ್ತಿದ್ದಂತೆ ಸ್ಥಳದಲ್ಲೇ ಇದ್ದ ಶಬ್ಬೀರ್ ಅಹಮದ್ ತಕ್ಷಣವೇ ಇಬ್ಬರನ್ನೂ ರಕ್ಷಿಸಿ ಸಮೀಪದ ಮಂಚೇನಹಳ್ಳಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಜೋಯ ಹಾಗೂ ಅಲಿಯಾ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಅವಘಡಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರುಕಳಿಸುತ್ತಲೇ ಇವೆ ಪ್ರಕರಣಗಳು
ದಂಡಿಗಾನಹಳ್ಳಿ ಜಲಾಶಯ ಸುತ್ತಲೂ ಬೆಟ್ಟಗುಡ್ಡಗಳಿದ್ದು, ಮಳೆಗಾಲದಲ್ಲಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಅಲ್ಲದೇ ಮಳೆಗಾಲದಲ್ಲಿ ಜಲಾಶಯ ತುಂಬಿ ಹರಿಯುವ ಸೊಬಗನ್ನು ಕಣ್ತುಂಬಿಕೊಳ್ಳಲು, ನೀರಿನಲ್ಲಿ ಆಟವಾಡಲು ಹಾಗೂ ಸೆಲ್ಫಿ ತೆಗೆಸಿಕೊಳ್ಳಲು ಬೆಂಗಳೂರು ಸೇರಿ ವಿವಿಧೆಡೆಯಿಂದ ಸಾವಿರಾರು ಮಂದಿ ನಿತ್ಯ ಆಗಮಿಸುತ್ತಾರೆ. ನೀರಿನಲ್ಲಿ ಮುಳುಗಿ ಸಾವಿಗೀಡಾಗುವ ಪ್ರಕರಣಗಳು ಪದೇಪದೆ ಮರುಕಳಿಸುತ್ತಲೇ ಇವೆ. ಪ್ರತಿವರ್ಷ ಕನಿಷ್ಠ 10 ಮಂದಿ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಆದರೂ ನೀರಾವರಿ ಇಲಾಖೆ ಅಥವಾ ಜಿಲ್ಲಾಡಳಿತ ಸೂಚನಾ ಫಲಕಗಳ ಅಳವಡಿಕೆ ಸೇರಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.