ಚೇಳೂರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಬಾಲಕ ಹಾಗೂ ಆತನನ್ನು ರಕ್ಷಿಸಲು ಹೋದ ವ್ಯಕ್ತಿ ಇಬ್ಬರೂ ಮೃತಪಟ್ಟಿರುವ ಘಟನೆ ತಾಲೂಕಿನ ಗುಂಡ್ಲಪಲ್ಲಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ತಾಲೂಕಿನ ಬೀರಂಗಿವಾಂಡ್ಲಪಲ್ಲಿ ಗ್ರಾಮದ ಭಾಸ್ಕರ್ (40) ಹಾಗೂ ಬೆಂಗಳೂರಿನ ಮಹೇಂದ್ರ (14) ಮೃತರು. ಮಹೇಂದ್ರ ಮೂಲ ಸೋಮನಾಥಪುರ ಗ್ರಾಮದವನಾಗಿದ್ದು, ಹಾಲಿ ಬೆಂಗಳೂರಿನಲ್ಲಿ ವಾಸವಿದ್ದ. ರಜೆಗೆಂದು ತಾಯಿಯ ತವರೂರು ಬೀರಂಗಿವಾಂಡ್ಲಪಲ್ಲಿಗೆ ಬಂದಿದ್ದ.
ನಲ್ಲಗುಟ್ಟಪಲ್ಲಿ ಗ್ರಾಮ ಪಂಚಾಯಿತಿಯ ಗುಂಡ್ಲಪಲ್ಲಿ ಗ್ರಾಮದ ಸರ್ಕಾರಿ ಶಾಲೆ ಹಿಂಭಾಗದಲ್ಲಿರುವ ನರಸಿಂಹರೆಡ್ಡಿ ಎಂಬುವರ ಕೃಷಿ ಹೊಂಡದಲ್ಲಿ 6-7 ಮಕ್ಕಳು ಈಜಾಡಲು ಗುರುವಾರ ಬಂದಿದ್ದಾರೆ. ಇವರ ಜತೆ ಮಹೇಂದ್ರ ಕೂಡ
ಈಜಾಡಲು ಕೃಷಿ ಹೊಂಡಕ್ಕೆ ಇಳಿದಿದ್ದಾನೆ. ಈಜು ಬಾರದ ಮಹೇಂದ್ರ ನೀರಿನಲ್ಲಿ ಮುಳುಗುವುದನ್ನು ಕಂಡ ಇತರ ಮಕ್ಕಳು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಪಕ್ಕದಲ್ಲೇ ಇದ್ದ ಭಾಸ್ಕರ್ ಬಾಲಕನ ರಕ್ಷಣೆಗಾಗಿ ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಈ ವೇಳೆ ಮಹೇಂದ್ರ
ಭಾಸ್ಕರ್ ಅವರನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಂಡ ಕಾರಣ ಇಬ್ಬರೂ ನೀರಿನಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ. ಇದನ್ನು ಕಂಡು ಭಯಗೊಂಡ ಇತರ ಮಕ್ಕಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ಕೃಷಿ ಹೊಂಡದ ಕಡೆ ಬಂದ ಗ್ರಾಮದ ಮಹಿಳೆಯೊಬ್ಬರು ಹೊಂಡದ ಬಳಿ ಎರಡು ಜತೆ ಬಟ್ಟೆ ಮತ್ತು ಚಪ್ಪಲಿಯನ್ನು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚೇಳೂರು ಪೊಲೀಸರು ಸ್ಥಳಕ್ಕೆ ಅಗ್ನಿಶಾಮಕ ದಳ ನೆರವಿನೊಂದಿಗೆ ಶವಗಳನ್ನು ಕೃಷಿ ಹೊಂಡದಿಂದ ಮೇಲಕ್ಕೆತ್ತಿದ್ದಾರೆ.