

ರಾಮನಗರ : ರಾಜ್ಯದಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದ್ದು, ಬುಧವಾರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕನಕಪುರ ತಾಲೂಕಿನ ಸಂಗಮ ವನ್ಯಜೀವಿ ವಲಯದ ಸ್ಥಳೀಯ ಪರಿಸರ ಅಭಿವೃದ್ಧಿ ಸಮಿತಿ ನೌಕರ ಮಾದೇಶ ನಾಯಕ (38) ಮತ್ತು ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಗೊಲ್ಲರದೊಡ್ಡಿಯ ಕೂಲಿ ಕಾರ್ಮಿಕ ಗಿರೀಶ್ (25) ಮೃತರು.
ಕೊಗ್ಗೆದೊಡ್ಡಿ ಗ್ರಾಮದ ಮಾದೇಶ ಅವರಿಗೆ ತಡರಾತ್ರಿ ಎದೆನೋವು ಕಾಣಿಸಿಕೊಂಡಿತು. ಕುಟುಂಬದವರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಮಾದೇಶ ಅವರು ನಾಲ್ಕೈದು ವರ್ಷಗಳಿಂದ ನೌಕರನಾಗಿ ಕೆಲಸ ಮಾಡುತ್ತಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಗೊಲ್ಲರದೊಡ್ಡಿಯ ಗಿರೀಶ್ ಅವರು ಗ್ರಾಮದ ಹೊರವಲಯದಲ್ಲಿ ಹಸು ಮೇಯಿಸುತ್ತಿದ್ದರು. ಈ ವೇಳೆ ಸಂಭವಿಸಿದ ಹೃದಯಾಘಾತದಿಂದಾಗಿ ಸ್ಥಳದಲ್ಲೇ ಕುಸಿದು ಮೃತಪಟ್ಟರು. ಗಿರೀಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದರು