

ವಿಜಯಪುರ: ಎಕ್ಸ್ಪ್ರೆಸ್ ರೈಲು ಚಲಿಸುತ್ತಿರುವಾಗಲೇ ಎರಡು ಬೋಗಿಗಳು ಕಳಚಿಕೊಂಡಿದ್ದರೂ ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿಹೋಗಿದೆ. ವಿಜಯಪುರದ ವಜ್ರ ಹನುಮಾನ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ.
ಸೊಲ್ಲಾಪುರ ವಿಜಯಪುರ ಮೈಸೂರ ಸಂಪರ್ಕಿಸುವ ಗೋಲಗುಂಬಜ್ ಎಕ್ಸ್ಪ್ರೆಸ್ ರೈಲಿನಿಂದ ಈ ಬೋಗಿಗಳು ಕಳಚಿಕೊಂಡಿವೆ. ಬೋಗಿಗಳ ನಡುವಿನ ಸಂಪರ್ಕ ಕೊಂಡಿ ತುಂಡಾದ ಕಾರಣ ಬೋಗಿಗಳು ಕಳಚಿಕೊಂಡಿವೆ. ಬೋಗಿಗಳಿಂದ ಬೇರ್ಪಟ್ಟು ಒಂದಷ್ಟು ದೂರ ಹೋದ ಬಳಿಕ ರೈಲು ನಿಂತಿದೆ.
ಬೋಗಿ ಸಂಪರ್ಕ ಕಡಿದುಕೊಳ್ಳುತ್ತಿದ್ದಂತೆ ಎರಡೂ ಬೋಗಿಗಳಲ್ಲಿದ್ದ ಪ್ರಯಾಣಿಕರು ಕೆಲಕಾಲ ಗಾಬರಿಯಲ್ಲಿದ್ದರು. ಸದ್ಯಕ್ಕೆ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಹೊಸ ಕೊಂಡಿ ಹಾಕಿ ಅಥವಾ ಕಟ್ ಆದ ಕೊಂಡಿ ದುರಸ್ತಿಗೊಳಿಸಿದ ಬಳಿಕ ಈ ರೈಲು ಪ್ರಯಾಣ ಮುಂದುವರಿಯಲಿದೆ. ಕಳಚಿಕೊಂಡಿರುವ ಬೋಗಿಗಳನ್ನು ನೋಡಲು ಜನರು ಜಮಾಯಿಸಿದ್ದು, ಸ್ಥಳಕ್ಕೆ ರೇಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.