

ಬಿಡದಿ: ಬಿಡದಿಯ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಪರವಾಗಿ ಬರಹ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಿಡದಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪ್ರತಿಷ್ಠಿತ ಕಂಪನಿಯ ಶೌಚಾಲಯದಲ್ಲಿ ದೇಶದ್ರೋಹಿ ಹೇಳಿಕೆಗಳನ್ನ ಬರೆಯಲಾಗಿತ್ತು. ಈ ಸಂಬಂಧ ಕಳೆದ ಶನಿವಾರ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ಇಳಿದ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಹೈಮದ್ ಹುಸೇನ್ (21), ಸಾಧಿಕ್ (24) ಬಂಧಿತ ಆರೋಪಿಗಳಾಗಿದ್ದು ಮೂಲತ ಉತ್ತರ ಕರ್ನಾಟಕದವರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅದೇ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.
ಭಾರತ ಗೆದ್ದಿದ್ದಕ್ಕೆ ಬರಹ: ಈ ಪ್ರಕರಣಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನ ವಿಚಾರಣೆ ಮಾಡಿದ ಸಂದರ್ಭದಲ್ಲಿ ಕ್ರಿಕೆಟ್ ವಿಷಯ ಹೊರ ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಈ ವೇಳೆ ಬಂಧಿತ ಆರೋಪಿಗಳನ್ನ ಸಹೋದ್ಯೋಗಿಗಳು ಕಿಚ್ಚಾಯಿಸಿದ್ದಾರೆ. ಇದರಿಂದ ಕುಪಿತಗೊಂಡ ಇಬ್ಬರು ಯುವಕರು ಪಾಕಿಸ್ತಾನದ ಪರವಾಗಿ ಬರಹ ಬರೆದಿದ್ದರ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಈ ಪ್ರಕರಣ ದಾಖಲು ತನಿಖೆ ನಡೆಸಿ ಪೋಲಿಸರು ಕಂಪನಿಯ ಸುಮಾರು 800 ಕ್ಕು ಹೆಚ್ಚು ಉದ್ದೋಗಿಗಳನ್ನು ವಿಚಾರಣೆ ನಡೆಸಿದ್ಸಾರೆ. ಸಿಸಿಟಿವಿ ದೃಶ್ಯಾವಳಿ, ಹ್ಯಾಂಡ್ ರೈಟಿಂಗ್ ಸ್ಕಿಲ್, ಭಾಷಾ ಬರವಣಿಗೆಯ ಶೈಲಿ ಸೇರಿದಂತೆ ಆರೋಪಿಗಳ ಕೈಯಲ್ಲಿ ಪುಟಗಟ್ಟಲೇ ಪೇಜ್ ನಲ್ಲಿ ಬರವಣಿಗೆ ಬರೆಸುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.