

ಹಾನಗಲ್ಲ: ರಾತ್ರಿ ವೇಳೆ ಬೀದಿ ದೀಪಗಳನ್ನು ಆರಿಸಿ ದಿನಸಿ ಅಂಗಡಿಯಲ್ಲಿ ನಗ-ನಗದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಹಾನಗಲ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ಗ್ರಾಮದ ಮಂಜುನಾಥ ಚನ್ನಬಸನಗೌಡ ಪಾಟೀಲ(33), ಪ್ರಕಾಶ ಫಕೀರಸ್ವಾಮಿ ರಜಪೂತ (38) ಬಂಧಿತರು.
ಜು. 14ರಂದು ರಾತ್ರಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಹೇಶ ಕ್ಯಾಲಕೊಂಡ ಎಂಬುವವರ ಕಿರಾಣಿ ಅಂಗಡಿಯಲ್ಲಿ ಇಟ್ಟಿದ್ದ 4 ಲಕ್ಷ ರೂ. ನಗದು ಹಾಗೂ 10 ತೊಲೆ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ಜು. 15ರಂದು ಹಾನಗಲ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಬೆನ್ನಟ್ಟಿದ್ದ ಪೊಲೀಸರ ತಂಡ 14 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ನಗ-ನಗದನ್ನು ವಶಪಡಿಸಿಕೊಂಡಿದ್ದಾರೆ.
ಮನೆಯ ದುರಸ್ತಿಗಾಗಿ ಅಂಗಡಿ ಮಾಲೀಕ ಮಹೇಶ ಕ್ಯಾಲಕೊಂಡ ಸಾಲ ಮಾಡಿ ಲಕ್ಷಾಂತರ ರೂಪಾಯಿ ತಂದಿಟ್ಟಿದ್ದರು. ಮನೆ ಗಟ್ಟಿಯಾಗಿಲ್ಲ ಎಂಬ ಕಾರಣಕ್ಕೆ ಬಂಗಾರದ ಆಭರಣಗಳನ್ನೂ ಅಂಗಡಿಯಲ್ಲಿಟ್ಟಿದ್ದರು. ಪ್ರತಿದಿನ ಅಂಗಡಿಗೆ ಬರುತ್ತಿದ್ದ ಆರೋಪಿಗಳು ಇದನ್ನೆಲ್ಲ ಗಮನಿಸಿದ್ದರು ಎನ್ನಲಾಗಿದೆ. ಕಳ್ಳತನ ಮಾಡುವ ದಿನ ರಾತ್ರಿ ಈ ಬೀದಿಯ ದೀಪಗಳನ್ನು ತೆಗೆದು ಅಂಗಡಿಯ ಶಟರ್ಸ್ ಕೀಲಿ ಮುರಿದು ಒಳನುಗ್ಗಿ ನಗ-ನಗದನ್ನು ದೋಚಿದ್ದರು. ಕಳ್ಳತನ ಮಾಡಿದ್ದ ಹಣವನ್ನು ಹಾವೇರಿಯ ಲಾಡ್ಜವೊಂದರಲ್ಲಿ ಆರೋಪಿಗಳಾದ ಮಂಜುನಾಥ 1.45 ಲಕ್ಷ ರೂ., ಪ್ರಕಾಶ 1.55 ಲಕ್ಷ ರೂ. ಹಂಚಿಕೊಂಡಿದ್ದರು.
ಕಳ್ಳತನಕ್ಕೆ ಬಳಸಿದ್ದ ಪಲ್ಸರ್ ಬೈಕ್ ಸಮೇತ ಶುಕ್ರವಾರ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 33 ಗ್ರಾಂ ಬಂಗಾರದ ತಾಳಿ ಚೈನ್, 19 ಗ್ರಾಂ ಚೈನ್, 7.5 ಗ್ರಾಂ ಬ್ರಾಸ್ಲೈಟ್, 8.5 ಗ್ರಾಂ ಕಿವಿಯೋಲೆ, 7 ಗ್ರಾಂನ 2 ಉಂಗುರಗಳು, 2 ಗ್ರಾಂ ಬಂಗಾರದ ಗುಂಡುಗಳು, 3 ಗ್ರಾಂ ಕಿವಿ ಟಾಪ್ಸ್, 2 ಗ್ರಾಂ ಬೆಂಡೋಲೆಗಳು ಸೇರಿದಂತೆ ಒಟ್ಟು 10 ತೊಲೆ ಬಂಗಾರದ ಆಭರಣಗಳನ್ನು ಮತ್ತು 33 ಗ್ರಾಂನ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ 2.10 ಲಕ್ಷರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚು ವ್ಯಕ್ತಪಡಿಸಿದ್ದಾರೆ.