ರಸ್ತೆ ಸಂಪರ್ಕವಿಲ್ಲದೆ ಕಂಗಾಲಾದವರ ಪ್ರತಿಭಟನೆ

18tvk03 neragunda
Published on

ತುರುವೇಕೆರೆ: ತಾಲೂಕಿನ ನೀರಗುಂದ ಗ್ರಾಮದ ಸಂಪರ್ಕ ರಸ್ತೆಗೆ ಸೇತುವೆ ಮತ್ತು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ನೀರಗುಂದ, ಅಜ್ಜೇನಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿದರು.

ಲೋಕಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಆರ್.ಅಲ್ಲಪ್ಪ ಮಾತನಾಡಿ, ಗ್ರಾಮದಲ್ಲಿರುವ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ, ಹತ್ತಾರು ವರ್ಷಗಳಿಂದ ಈ ರಸ್ತೆಯನ್ನು ದುರಸ್ಥಿ ಪಡಿಸಿ, ಸೇತುವೆ ನಿರ್ಮಾಣ ಮಾಡಿ ಎಂದು ಸಾಕಷ್ಟು ಬಾರಿ ಶಾಸಕರಿಗೂ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.

ಜನರು ಓಡಾಡಲೂ ಕಷ್ಟವಾಗುತ್ತಿದೆ, ರಸ್ತೆ ತುಂಬಾ ನೀರು ನಿಂತಿರುತ್ತದೆ.ಗುಂಡಿಗಳು ತುಂಬಿವೆ. ಮಳೆಗಾಲದಲ್ಲಂತೂ ಇಲ್ಲಿ ಓಡಾಡುವುದು ಕಷ್ಟಕರ. ಮುನ್ನೂರು ಮೀಟರ್‌ ದೂರ ಕ್ರಮಿಸುವ ರಸ್ತೆ ಸರಿಯಿಲ್ಲದ ಕಾರಣ ಬಳಸಿಕೊಂಡು ಸುಮಾರು ಐದು ಕಿಮೀ ದೂರ ಹೋಗಬೇಕಿದೆ ಎಂದರು.

ರಸ್ತೆಯ ಮಧ್ಯೆ ನೀರು ತುಂಬಿರುವ ಕಾರಣ ಮತ್ತು ಗುಂಡಿಗಳು ಇರುವ ಕಾರಣಕ್ಕೆ ದ್ವಿಚಕ್ರ ವಾಹನಗಳು ಓಡಾಡಲು ಕಷ್ಟವಾಗಿದೆ. ರಸ್ತೆ ಮಧ್ಯೆ ಹಾಕಿರುವ ಚಪ್ಪಡಿ ಕಲ್ಲುಗಳು ಒಡೆದು ಹೋಗಿರುವುದರಿಂದ ವಾಹನಗಳನ್ನು ಸರಾಗವಾಗಿ ಚಾಲನೆ ಮಾಡಲು ಅಸಾಧ್ಯವಾಗಿದೆ. ಇನ್ನು ನಡೆದಾಡಿಕೊಂಡು ಹೋಗುವವರ ಸ್ಥಿತಿಯಂತೂ ಕೇಳುವ ಹಾಗೇ ಇಲ್ಲ. ಅದೆಷ್ಟೋ ಮಂದಿ ವಾಹನದಿಂದ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ ಎಂದು ಗ್ರಾಮದ ಸ್ಥಳೀಯರಾದ ಶಿವಲಿಂಗಪ್ಪ ಹೇಳಿದರು.

ರಸ್ತೆ ಸರಿಯಿಲ್ಲದ ಕಾರಣ ನೀರಗುಂದ, ಅಜ್ಜೇನಹಳ್ಳಿ, ಗೊಲ್ಲರಹಟ್ಟಿ, ಸೋಮಲಾಪುರ, ಅರಳಗುಪ್ಪೆ, ಎ.ಹೊಸಹಳ್ಳಿ, ವೆಂಕಟಾಪುರ, ಮುದ್ಲಾಪುರ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಚರಿಸಲು ತೊಂದರೆಯಾಗಿದೆ. ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡದಿದ್ದಲ್ಲಿ ತುರುವೇಕೆರೆಯಿಂದ ಕೆಬಿ ಕ್ರಾಸ್‌ ಕಡೆ ತೆರಳುವ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಲಿಂಗಪ್ಪ, ಮಹಲಿಂಗಪ್ಪ, ಚಂದ್ರಪ್ಪ, ನಟರಾಜ್‌, ಓಂ ಶಿವಯ್ಯ, ಶಂಕರಣ್ಣ, ರಮೇಶ್‌, ಚರಣ್, ಕಾಂತರಾಜು, ಶಿವಮ್ಮ, ವೀರುಪಾಕ್ಷ ಪಟೇಲ್‌ ದಯಾನಂದ್‌ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net