

ತುರುವೇಕೆರೆ: ಗಣಪತಿ ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಅಪ್ಪ, ಮಗ ಮತ್ತು ಮತ್ತೊಬ್ಬ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಟನೆ ತಾಲೂಕಿನ ದಂಡಿನಶಿವರ ಹೋಬಳಿ ಮಾರಸಂದ್ರ ಸವೀಪದ ರಂಗನಹಟ್ಟಿ ಕಟ್ಟೆಯಲ್ಲಿ ಭಾನುವಾರ ನಡೆದಿದೆ.
ರಂಗನಹಟ್ಟಿ ಗ್ರಾಮ ನಿವಾಸಿಗಳಾದ ರೇವಣ್ಣ (50), ಅವರ ಪುತ್ರ ಶರತ್(22), ದಯಾನಂದ(26) ಮೃತ ದುರ್ದೈವಿಗಳು.
ಗ್ರಾಮದಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶನನ್ನು ಊರಿನ ಯುವಕರು ಬೆಳಗಿನಿಂದ ಮೆರವಣಿಗೆ, ಉತ್ಸವ ನಡೆಸಿ 3 ಗಂಟೆಯ ನಂತರ ರಂಗನಕಟ್ಟೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಮುಂದಾಗಿದ್ದಾರೆ. ಈ ವೇಳೆ ಗಣೇಶ ಮೂರ್ತಿಯನ್ನು ಹಿಡಿದು ಶರತ್ ಮತ್ತು ದಯಾನಂದ್ ನೀರಿಗಿಳಿದಿದ್ದು ಕಟ್ಟೆಯಲ್ಲಿ ಕೆಸರು ಹೆಚ್ಚಿದ್ದರಿಂದ ಕಾಲುಗಳು ಹೂತುಕೊಂಡು ಈಜಲು ಸಾಧ್ಯವಾಗದೆ ಕಟ್ಟೆಯ ದಡದಲ್ಲಿದ್ದವರನ್ನು ಸಹಾಯಕ್ಕೆ ಕೂಗಿಕೊಂಡಿದ್ದಾರೆ. ತಕ್ಷಣವೇ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಶರತ್ ತಂದೆ ರೇವಣ್ಣ ನೀರಿಗೆ ಧುಮಿಕಿದ್ದಾರೆ. ಅವರು ಕೆಸರಲ್ಲಿ ಸಿಲುಕಿಕೊಂಡು ನೀರಿನಲ್ಲಿ ಈಜಲಾಗದೆ ಮುಳುಗಿದ್ದಾರೆ.
ಮೂರು ತಿಂಗಳ ಹಿಂದೆ.ಮದುವೆಯಾಗಿದ್ದ ದಯಾನಂದ. ಮೃತ ದಯಾನಂದ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಮತ್ತೊಬ್ಬ ಎಂ.ಕಾಂ., ಪಧವೀಧರ ಶರತ್. ಇತ್ತೀಚೆಗಷ್ಟೇ ಟಿಕೋತ್ಸವ ಮುಗಿಸಿ ಗ್ರಾಮಕ್ಕೆ ಮರಳಿದ್ದರು.
ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು: ವಿಷಯ ತಿಳಿದು ರಂಗನಹಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರು ಧಾವಿಸಿ ಸ್ಥಳದಲ್ಲಿ ಜಮಾಯಿಸಿದ್ದರು. ಮೃತರ ಎರಡೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.