ಗ್ಯಾರಂಟಿಗಳನ್ನು ಟೀಕಿಸುವ ಶಾಸಕ ಎಂ.ಟಿ.ಕೃಷ್ಣಪ್ಪಗೆ ಅರಳೋ ಮರುಳೋ

TVK_Congress
Published on

ತುರುವೇಕೆರೆ: ಶಾಸಕ ಎಂ.ಟಿ.ಕೃಷ್ಣಪ್ಪ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಕೊಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಹರಿಹಾಯ್ದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೃಷ್ಣಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಬಹಳ ಹಗುರವಾಗಿ ಮಾತನಾಡುತ್ತಿದ್ದು ಅವರಿಗೆ ಶೋಭೆ ತರುವಂತದ್ದಲ್ಲ. ಚುನಾವಣಾ ಮುನ್ನ ಕೊಟ್ಟಿದ್ದ ಗ್ಯಾರಂಟಿಗಳನ್ನು ನೂರೇ ದಿನಗಳಲ್ಲಿ ಈಡೇರಿಸಿದೆ. ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ್ದು ರಾಜ್ಯದ 1 ಕೋಟಿ 10 ಲಕ್ಷ ಮಹಿಳೆಯರಿಗೆ ತಲಾ 2000 ರೂ.,ಗಳನ್ನು ಬ್ಯಾಂಕ್ ಖಾತೆಗೆ ಹಾಕಲಾಗಿದೆ. ಆದರೂ ಶಾಸಕರು ಇಲ್ಲಸಲ್ಲದ ಮಾತುಗಳನ್ನಾಡಿದ್ದು ಗ್ಯಾರಂಟಿಗಳು ಲೋಕಸಭಾ ಚುನಾವಣೆವರೆಗೆ ಎಂದು ಹೇಳಿರುವುದು ಸರಿಯಲ್ಲ ಎಂದರು.

ಕ್ಷೇತ್ರದಲ್ಲಿ ಹಲವು ಸಮಸ್ಯಗಳ ಹಾಗೂ ಅಭಿವೃದ್ಧಿ ಬಗ್ಗೆ ಗಮನ ನೀಡದೆ ಸುಖಾ ಸುಮ್ಮನೆ ಸರ್ಕಾರವನ್ನು ಬೈಯತ್ತಾ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಬಳಿ ತೆರಳಿ ಹಾರ ಹಾಕಿ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಂಡು ಬರುತ್ತಿರುವ ಕೃಷ್ಣಪ್ಪಗೆ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಕುಟುಕಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬೆಮೆಲ್ ಕಾಂತರಾಜು ತಾಲೂಕಿನಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ದೂರುವ ಶಾಸಕ ಎಂ.ಟಿ.ಕೃಷ್ಣಪ್ಪ ಅವರೇ ತಾಲೂಕು ಮಟ್ಟದಲ್ಲಿ ವರ್ಗಾವಣೆಗೆ ಶಿಫಾರಸು ಪತ್ರ ನೀಡುತ್ತಾರೆ. ಇನ್ನೂ ಮಾಜಿ ಶಾಸಕ ಮಸಾಲಜಯರಾಮ್ ತಂದಿದ್ದ 3300 ಮನೆಗಳನ್ನೇ ಕ್ಷೇತ್ರದಲ್ಲಿ ಉಳಿಸಿಕೊಳ್ಳಲಾಗದ ಶಾಸಕರು ಸುಮ್ಮನೆ ಮಾತನಾಡುತ್ತಾರೆ. ಶಾಸಕರಿಗೆ ಈಗಾಗಲೇ 77 ವರ್ಷ ದಾಟುತ್ತಿದ್ದು ಈ ಸಮಯದಲ್ಲಿ ಅರುಳು ಮರುಳು ಆಗುವುದು ಸಹಜ. ಹಾಗಾಗಿ, ಉತ್ತಮ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಿಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲನಾಗರಾಜು, ಪಟ್ಟಣ ಪಂಚಾಯಿತಿ ಸದಸ್ಯರಾದ ಯಜಮಾನ್ ಮಹೇಶ್, ಮುಖಂಡರಾದ ನಂಜುಂಡಪ್ಪ, ಜವರೇಗೌಡ, ಶಶಿಕುಮಾರ್, ಶಿವರಾಜು, ರುದ್ರೇಶ್, ಲಕ್ಷ್ಮಣಗೌಡ, ಶೇಷೆಗೌಡ, ನಟರಾಜು, ಪ್ರಕಾಶ್, ಶಿವರಾಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net