ನಿಸರ್ಗದಾಟಕ್ಕೆ ತೊಗರಿ ಕಣಜ ತಲ್ಲಣ

Toor
ಕಲಬುರಗಿ ಜಿಲ್ಲೆಯಲ್ಲಿ ಒಣಗಿದ ತೊಗರಿ ಜಮೀನೊಂದಕ್ಕೆ ಭೇಟಿ ನೀಡಿದ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ರೈತನಿಗೆ ಸಲಹೆ.
Published on

ಕಡಿಮೆ ಇಳುವರಿ, ಉತ್ಪಾದನೆ ಕುಂಠಿತ ಬಿಸಿ | ಮುಗಿಲತ್ತ ಮುಖ ಮಾಡಿದ ಅನ್ನದಾತ

ಜಯತೀರ್ಥ ಪಾಟೀಲ ಕಲಬುರಗಿ

ಹಲವು ದಿನಗಳಿಂದ ಮೋಡಕವಿದ ವಾತಾವರಣ, ಮಳೆ, ಬಿಸಿಲು ಹೀಗೆ ಹವಾಮಾನ ವೈಪರೀತ್ಯದಿಂದಾಗಿ ಪ್ರಮುಖ ವಾಣಿಜ್ಯ ಬೆಳೆ ತೊಗರಿಗೆ ಕಂಟಕ ಎದುರಾಗಿದೆ. ಇತ್ತೀಚೆಗೆ ನೆಟೆರೋಗದಿಂದ ತೊಗರಿ ಒಣಗಿ ನಷ್ಟ ಅನುಭವಿಸಿದ್ದ ಕೃಷಿಕನಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಉತ್ತಮ ಮಳೆಯಿಂದ ಬೆಳೆ ಬಂಪರ್ ಬಂದಿದ್ದರೂ ನೈಸರ್ಗಿಕ ವಿಕೋಪದ ಹೊಡೆತಕ್ಕೆ ನಲುಗುವಂತಾಗಿದೆ.

ಜಿಲ್ಲೆಯಲ್ಲಿ ಆರು ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಹಿಂಗಾರು ೨.೧೭ ಲಕ್ಷ ಹೆಕ್ಟೇರ್ ಗುರಿ ಪೈಕಿ ೧.೫೭ ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಕಲಬುರಗಿ, ಆಳಂದ, ಅಫಜಲಪುರ ಸೇರಿ ಅನೇಕ ಕಡೆ ತೊಗರಿ ಕಟಾವು ಪ್ರಾರಂಭವಾಗಿದೆ. ಆದರೆ ಕೆಲ ದಿನಗಳಿಂದ ಹವಾಮಾನದಲ್ಲಿನ ಬದಲಾವಣೆ ತೀವ್ರ ಸಂಕಷ್ಟ ತಂದೊಡ್ಡಿದೆ.

ಕಡಲೆ, ಜೋಳಕ್ಕೆ ಈ ಮಳೆ ಅನುಕೂಲವಾದರೂ ತೊಗರಿಗೆ ಕಂಟಕವಾಗಿ ಪರಿಣಮಿಸಿದೆ. ಇಳುವರಿ ಜತೆಗೆ ಉತ್ಪಾದನೆಗೂ ಹೊಡೆತ ನೀಡಲಿದೆ. ನೆಟೆ ರೋಗ, ಬೆಳೆ ಒಣಗುವಿಕೆ, ಕುಡಿ ಬೀಳುವುದು ಹೀಗೆ ಹತ್ತಾರು ಸಮಸ್ಯೆ ಕಾಣಿಸಿಕೊಂಡು ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಪರಿಸ್ಥಿತಿ ಇದೆ. ಈ ಎಲ್ಲದರ ಮಧ್ಯೆ ಇನ್ನೇನು ತೊಗರಿ ರಾಶಿಯಾಗಿ ಮಾರುಕಟ್ಟೆಗೆ ಬರುತ್ತಿದ್ದಂತೆ ದರ ಕುಸಿತ ಬೆಳೆಗಾರನ ಗಾಯದ ಮೇಲೆ ಬರೆ ಎಳೆದಿದೆ.

ನವೆಂಬರ್‌ನಲ್ಲಿ ಸಾಮಾನ್ಯ ಮಳೆ ೧೯.೨ ಮಿಮೀ ಇದ್ದರೆ, ೫.೬(ಶೇ.೭೧ ಕಮ್ಮಿ) ಮಿಮೀ ಸುರಿದಿದೆ. ಆದರೆ ನಾಲ್ಕು ವಾರಗಳಿಂದ ಮಳೆ ಬಾರದೆ ಕಡಿಮೆ ಮತ್ತು ಮಧ್ಯಮ ಆಳದ ಭೂಮಿಯಲ್ಲಿ ತೇವಾಂಶ ಕೊರತೆಯಿಂದ ತೊಗರಿ ಬೆಳೆ ಒಣಗಲಾರಂಭಿಸಿದೆ. ಮ್ಯಾಕ್ರೋಫೋಮಿನಾ ಫೆಜಿಯೊಲೈ ಶಿಲೀಂಧ್ರದಿAದ ಬರುವ ಒಣಬೇರು ಕೊಳೆರೋಗ ಹೆಚ್ಚಾಗಿ ಕಾಣಿಸಿದೆ. ಜತೆಗೆ ಫೈಟೋಫೋರಾ ಮಚ್ಚೆರೋಗ ಅಲ್ಲಲ್ಲಿ ತೊಗರಿ ಒಣಗಲು ಕಾರಣವಾಗಿದೆ.

ಮಳೆ ಏರುಪೇರು

ಕಳೆದ ೨೪ ಗಂಟೆಯಲ್ಲಿ ಜಿಲ್ಲೆಯಲ್ಲಿ ೦.೧ ಮಿಮೀ ಸಾಮಾನ್ಯ ಮಳೆ ಇದ್ದರೆ, ೨ ಮಿಮೀ ಸುರಿದಿದೆ. ಏಳು ದಿನಗಳಲ್ಲಿ ಸರಾಸರಿ ೧.೩ ಮಿಮೀ ಇದ್ದರೆ, ೪.೪ ಮಿಮೀ ಮಳೆಯಾಗಿದೆ. ಅ.೧ರಿಂದ ಡಿ.೭ರವರೆಗೆ ಸರಾಸರಿ ೧೨೪ ಮಿಮೀ ಪೈಕಿ ೧೦೬ ಮಿಮೀ ಮಳೆ ಬಂದಿದೆ.

ಬೆಳೆ ವಿಮೆ ಮಧ್ಯಂತರ ಪರಿಹಾರ

ತೊಗರಿ ಬೆಳೆ ವಿಮೆಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ೭೧.೮೧ ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಈ ಪೈಕಿ ಅಫಜಲಪುರ ೬.೨೯ ಕೋಟಿ ರೂ., ಆಳಂದ ೨೧.೪೨, ಚಿಂಚೋಳಿ ೩.೧೭, ಚಿತ್ತಾಪುರ ೫.೩೭, ಜೇವರ್ಗಿ ೫.೯೯, ಕಲಬುರಗಿ ೯.೯೫, ಕಾಳಗಿ ೪.೬೮, ಕಮಲಾಪುರ ೩.೩೯, ಸೇಡಂ ೬.೨೮, ಶಹಾಬಾದ್ ೧.೩೩ ಹಾಗೂ ಯಡ್ರಾಮಿ ತಾಲೂಕಿನಲ್ಲಿ ೩.೯೩ ಕೋಟಿ ರೂ. ಪರಿಹಾರ ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net