

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಿಣಗಾ-ಕಾರವಾರ ನಡುವೆ ಇರುವ ಸುರಂಗವು ಸುರಕ್ಷಿತವಾಗಿದ್ದು, ಅದರಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಬಹುದು ಎಂದು ಜುಲೈ 21 ರಂದೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಆದರೂ ಸುರಂಗವನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡದೇ ಜಿಲ್ಲಾಡಳಿತ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದೆ ಎಂದು ಎಂಎಲ್‌ಸಿ ಗಣಪತಿ ಉಳ್ವೇಕರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎನ್‌ಎಚ್‌ಎಐ ನೀಡಿದ ಪ್ರಮಾಣಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು, ಕಾರವಾರ ಶಾಸಕರು ಟನಲ್‌ಗೆ ಸುರಕ್ಷತಾ ಪ್ರಮಾಣಪತ್ರವಿಲ್ಲ ಇದರಿಂದ ವಾಹನ ಸಂಚಾರ ಬಂದ್ ಮಾಡಿ ಎಂದು ಸೂಚನೆ ನೀಡಿದ್ದನ್ನು ಗಮನಿಸಿದೆವು. ತೊಂದರೆ ಇರಬಹುದು ಎಂದುಕೊಂಡಿದ್ದೆವು. ಆದರೆ, ಸುರಂಗ ಬಂದ್ ಮಾಡಿ 75 ದಿನ ಕಳೆಯಿತು. ಇದರಿಂದ ಬೈತಖೋಲ್-ಬಿಣಗಾ ನಡುವೆ 3 ಅಪಘಾತಗಳು ಸಂಭವಿಸಿದ್ದು, ಒಂದು ಸಾವು ಸಂಭವಿಸಿದೆ. ಜನ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಹಾಗಾಗಿ ಅಧಿಕಾರಿಗಳ ಜತೆ ಚರ್ಚಿಸಿದಾಗ ಜುಲೈ ತಿಂಗಳಲ್ಲಿಯೇ ಎನ್‌ಎಚ್‌ಎಐ ಸುರಕ್ಷತಾ ಪ್ರಮಾಣತ್ರ ನೀಡಿದೆ ಎಂಬ ಅಂಶ ಬೆಳಕಿಗೆ ಬಂತು. ಪುಣೆಯ ಇಂಜಿನಿಯರಿಂಗ್ ಕಾಲೇಜ್ ಅಥವಾ ಸಿಒಇಪಿ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಭೂಗರ್ಭಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್.ಎ.ಮೆಶ್ರಾಂ ಅವರು ಸೆ. 5 ರಂದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಸುರಂಗವು ವಾಹನ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ವರದಿ ನೀಡಿದ್ದಾರೆ.
ಅದನ್ನು ಆಧರಿಸಿ ಎನ್‌ಎಚ್‌ಎಐ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ರಾಷ್ಟ್ರೀಯ ಹೆದ್ದಾರಿ ಗುಣಮಟ್ಟ ಹಾಗೂ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಎನ್‌ಎಚ್‌ಎಐ ಸ್ವತಃ ಪ್ರಮಾಣಪತ್ರ ನೀಡಿದರೂ ಸುರಂಗವನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡದೇ ಇರುವ ಜಿಲ್ಲಾಧಿಕಾರಿಗಳ ನಡೆಯ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತಕ್ಕೆ ವಾರದ ಗಡುವು ನೀಡಿದ್ದೇನೆ. ಅಲ್ಲಿಯವರೆಗೆ ಸ್ಪಂದಿಸದೇ ಇದ್ದರೆ ಸೆ.29 ರಂದು ಸ್ವತಃ ತೆರಳಿ ಸುರಂಗವನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಿಕೊಡಲಿದ್ದೇನೆ. ಇದೊಂದು ಪಕ್ಷಾತೀತ ಹೋರಾಟವಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ನಾನು ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಡಾ.ನಿತಿನ್ ಪಿಕಳೆ ಇದ್ದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಸಿರುವ ಐಆರ್‌ಬಿ ಕಂಪನಿ ಬೇಕಾಬಿಟ್ಟಿ ವರ್ತಿಸುತ್ತಿದೆ. ಸರಿಯಾಗಿ ಸರ್ವೀಸ್ ರಸ್ತೆ ಮಾಡಿಲ್ಲ. ಸಂಪೂರ್ಣ ರಸ್ತೆ ಕಾಮಗಾರಿ ಮುಗಿಸದೇ ಟೋಲ್ ವಸೂಲಿ ಮಾಡುತ್ತಿದೆ. ಅದನ್ನು ನಿಯಂತ್ರಿಸಬೇಕಿದ್ದ ಎನ್‌ಎಚ್‌ಎಐ ಕೂಡ ಜಿಲ್ಲಾಡಳಿತದ ಸೂಚನೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ನಾವು ನೇರವಾಗಿ ಕಂಪನಿ ಅಥವಾ ಎನ್‌ಎಚ್‌ಎಐ ಮೇಲೆ ಹಿಡಿತ ಹೊಂದಿಲ್ಲ. ಎನ್‌ಎಚ್‌ಎಐ ಹಾಗೂ ಐಆರ್‌ಬಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಚರ್ಚಿಸಿ ಸುರಂಗ ತೆರೆಯುವ ಬಗ್ಗೆ ನಿರ್ಧರಿಸಲಾಗುವುದು.ಗಂಗೂಬಾಯಿ ಮಾನಕರ್ಜಿಲ್ಲಾಧಿಕಾರಿ ಉತ್ತರ ಕನ್ನಡ