More

    ಸುರಂಗ ಸಂಚಾರ ಪ್ರಾರಂಭಕ್ಕೆ ವಾರದ ಗಡುವು ನೀಡಿದ ಉಳ್ವೇಕರ್

    ಕಾರವಾರ: ಆಡಳಿತ ಪಕ್ಷದ ಜನಪ್ರತಿನಿಧಿಗಳು ಹಾಗೂ ಐಆರ್‌ಬಿ ಯ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಕಾರವಾರದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಎಂಎಲ್‌ಸಿ ಗಣಪತಿ ಉಳ್ವೇಕರ್ ಆರೋಪಿಸಿದ್ದಾರೆ.
    ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ವಿಸ್ತರಣೆ ಭಾಗವಾಗಿರುವ ಕಾರವಾರ-ಬಿಣಗಾ ಸುರಂಗದಲ್ಲಿ ಕಳೆದ ಕೆಲ ತಿಂಗಳಿಂದ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ.

    ಸುರಂಗವು ಸುರಕ್ಷಿತವಾಗಿಲ್ಲ ಎಂಬ ಕಾರಣ ನೀಡಿ ಶಾಸಕ ಸತೀಶ ಸೈಲ್ ತಾವೇ ಉದ್ಘಾಟಿಸಿದ ಟೆನಲ್ ಮಾರ್ಗವನ್ನು ಬಂದ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದರ ಹಿಂದೆ ಬೇರೇನಾದರೂ ಕಾರಣವಿದೆಯೇ ಎಂಬುದನ್ನು ಅವರು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
    ಸುರಂಗದಲ್ಲಿ ಸಂಚಾರಕ್ಕೆ ಅವಕಾಶವಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ ಸೈಲ್ ಅವರು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಜನರನ್ನು ತೊಂದರೆಗೆ ಸಿಲುಕಿಸಿದ್ದಾರೆ.. ಸುರಕ್ಷತೆ ಎಂಬ ಸಬೂಬು ಹೇಳುತ್ತಿದ್ದಾರೆ. ಇದರಿಂದ ಜನ ಪ್ರತಿ ದಿನ ಬಿಣಗಾದಿಂದ ಕಾರವಾರಕ್ಕೆ ಮೂರ್ನಾಲ್ಕು ಕಿಮೀ ಸುತ್ತಿ ಬರಬೇಕಾಗಿದೆ.

    ಇದನ್ನೂ ಓದಿ:ಎನ್‌ಎಚ್‌-66 ಪಕ್ಕದ ನಿವಾಸಿಗಳಿಗೊಂದು ಮಾಹಿತಿ

    ಪ್ರತಿ ದಿನ ಸಾರ್ವಜನಿಕರಿಂದ ದೂರು ಬರುತ್ತಿದೆ. ಜಿಲ್ಲಾಡಳಿತ ಹಾಗೂ ಹಾಲಿ ಸರ್ಕಾರ ಇದಕ್ಕೆ ಜವಾಬ್ದಾರವಾಗಿದೆ. ಸಾರ್ವಜನಿಕರ ಸಂಯಮದ ಕಟ್ಟೆ ಒಡೆಯುತ್ತಿದೆ. ಸುರಂಗವನ್ನು ತಕ್ಷಣ ಸಾರ್ವಜನಿಕರ ಸಂಚಾರಕ್ಕೆ ತೆರವು ಮಾಡಿಕೊಡಬೇಕು ಎಂದು ಒತ್ತಾಯಿಸುತ್ತೇನೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿಯದೇ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಉಳ್ವೇಕರ್ ಒತ್ತಾಯಿಸಿದ್ದಾರೆ.
    ಹಾಗೊಮ್ಮೆ ಕ್ರಮ ವಹಿಸದೇ ಇದ್ದಲ್ಲಿ ಸೆ. 29 ರಂದು ಸ್ವತಃ ನಿಂತು ಸಾರ್ವಜನಿಕರ ಉಪಯೋಗಕ್ಕೆ ತೆರವು ಮಾಡಿಕೊಡುತ್ತೇನೆ ಎಂದು ಉಳ್ವೇಕರ್ ಎಚ್ಚರಿಸಿದ್ದಾರೆ. ಅದಕ್ಕಾಗಿ ಯಾವುದೇ ಸ್ಥಿತಿಯನ್ನೂ ಎದುರಿಸಲು ಸಿದ್ಧ ಎಂದಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts