More

    ಎನ್‌ಎಚ್‌-66 ಪಕ್ಕದ ನಿವಾಸಿಗಳಿಗೊಂದು ಮಾಹಿತಿ

    ಕಾರವಾರ:ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್‌-66) ರ ಚತುಷ್ಪಥ ವಿಸ್ತರಣೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನೇತೃತ್ವದ ತಂಡ ಜು.15 ರಂದು ಬಸ್‌ನಲ್ಲಿ ತೆರಳಿ ಪರಿಶೀಲನೆ ನಡೆಸಲಿದೆ.
    ಮಾಜಾಳಿಯ ಗೋವಾ ಗಡಿಯಿಂದ ಭಟ್ಕಳ ಗೊರಟೆಯವರೆಗೆ ತಂಡವು ತೆರಳಲಿದ್ದು, ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಗಣಿ, ಪೊಲೀಸ್, ವಿಶೇಷ ಭೂಸ್ವಾಧೀನಾಧಿಕಾರಿಗಳು ಸೇರಿ 17 ಅಧಿಕಾರಿಗಳು ಈ ತಂಡದಲ್ಲಿ ಇರುವರು.

    ಎನ್‌ಎಚ್‌-66 ಸಮೀಕ್ಷೆ ಏಕೆ ..?

    ಗೋವಾ ಗಡಿಯಿಂದ ಭಟ್ಕಳ ಗೊರಟೆವರೆಗೆ 146 ಕಿಮೀ ಉತ್ತರ ಕನ್ನಡ ಕರಾವಳಿಯಲ್ಲಿ ಹಾದು ಹೋಗುವ ಎನ್‌ಎಚ್‌-66 ವಿಸ್ತರಣೆ ಕಾರ್ಯವು 2014 ರಿಂದ ನಡೆದಿದೆ. ಸುಮಾರು 2.5 ಸಾವಿರ ಕೋಟಿ ರೂ.ಗಳ ಈ ಯೋಜನೆಯನ್ನು ಐಆರ್‌ಬಿ ಎಂಬ ಕಂಪನಿ ಪಡೆದುಕೊಂಡಿದೆ. ಯೋಜನೆಯಂತೆ 2017 ರಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿತ್ತು.

    ಆದರೆ, 2023 ಕಳೆದರೂ ಕಾಮಗಾರಿ ಮುಕ್ತಾಯವಾಗಿಲ್ಲ. ಕಂಪನಿ 2020 ರಲ್ಲೇ ಜಿಲ್ಲೆಯಲ್ಲಿ ಮೂರು ಟೋಲ್‌ ಗೇಟ್‌ಗಳನ್ನು ಆರಂಭಿಸಿದೆ. ಕಳೆದ ಬಾರಿ ಟೋಲ್‌ ಶುಲ್ಕವನ್ನೂ ಹೆಚ್ಚಿಸಿದೆ. ಕಂಪನಿ ಹೇಳುವಂತೆ 138 ಕಿಮೀ ಕಾಮಗಾರಿ ಮುಕ್ತಾಯವಾಗಿದೆ. ಆದರೆ, ಇದುವರೆಗೂ ಹಲವೆಡೆ ಸಮರ್ಪಕ ರಸ್ತೆಯಾಗಿಲ್ಲ.

    Belekeri-Toll-gate

    ಇದನ್ನೂ ಓದಿ:ಸಂಚಾರಕ್ಕೆ ಮುಕ್ತವಾದ ರಾಜ್ಯದ ಎರಡನೇ ಅತಿ ದೊಡ್ಡ ಸುರಂಗ

    ಹೊನ್ನಾವರ, ಭಟ್ಕಳ, ಕುಮಟಾ ಶಹರಗಳಲ್ಲೇ ರಸ್ತೆ ಕಾಮಗಾರಿ ಆಗಿಲ್ಲ. ಕಾರವಾರದ ಬಿಣಗಾ, ಅರಗಾ, ಮುದಗಾ ಘಟ್ಟಗಳಲ್ಲಿ ರಸ್ತೆ ಕಾಮಗಾರಿ ಮುಗಿದಿಲ್ಲ. ಅಂಕೋಲಾ, ಹೊನ್ನಾವರದಲ್ಲಿ ಒಂದೇ ಸೇತುವೆಯ ಮೇಲೆ ವಾಹನ ಸಂಚಾರ ನಡೆದಿದೆ. ರಸ್ತೆಯಲ್ಲಿ ಹಲವೆಡೆ ಇದ್ದಕ್ಕಿದ್ದಂತೆ ತಿರುವುಗಳಿವೆ. ಇದರಿಂದ ಸಾಕಷ್ಟು ಅಪಘಾತಗಳು ಉಂಟಾಗುತ್ತಿದೆ.

    ಎನ್‌ಎಚ್‌-66 ಪಕ್ಕವೂ ನರಕ

    Bhatkal Flood

    ರಾಷ್ಟ್ರೀಯ ಹೆದ್ದಾರಿ 66 ವಾಹನ ಸವಾರರಿಗೆ ಈ ಸಮಸ್ಯೆಯಾದರೆ ರಸ್ತೆ ವಿಸ್ತರಣೆಯಿಂದ ಹೆದ್ದಾರಿ ಪಕ್ಕದ ನಿವಾಸಿಗಳಿಗೆ ಕಳೆದ ಕೆಲ ವರ್ಷಗಳಿಂದ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಹೆದ್ದಾರಿಯ ಪಕ್ಕದ ಗುಡ್ಡ ಕುಸಿಯುತ್ತಿದೆ. ಚರಂಡಿಗಳನ್ನು ಕಂಪನಿ ಸರಿಯಾಗಿ ನಿರ್ಮಿಸದ ಕಾರಣ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಭಟ್ಕಳ, ಕಾರವಾರದ ಅಮದಳ್ಳಿ, ಕುಮಟಾದ ಹಂದಿಗೋಣ ಸೇರಿ ಹಲವೆಡೆ ಇಂಥ ಸಮಸ್ಯೆ ಇದೆ.

    ಅಂಕೋಲಾದ ಬೆಳಸೆ ಸೇರಿ ವಿವಿಧೆಡೆ ನೂರಾರು ಎಕರೆ ಕೃಷಿ ಭೂಮಿಯು ಹೆದ್ದಾರಿ ನಿರ್ಮಾಣದ ಕಾರಣಕ್ಕೆ ಪ್ರಯೋಜನಕ್ಕೆ ಬಾರದಂತಾಗಿದೆ. ಕಂಪನಿ ಹೊಸ ಬಸ್‌ ನಿಲ್ದಾಣಗಳನ್ನು ನಿರ್ಮಿಸಿಲ್ಲ. ಬೀದಿ ದೀಪ ಅಳವಡಿಸಿಲ್ಲ. ಬೇಕಾದಲ್ಲಿ ಸರ್ವೀಸ್‌ ರಸ್ತೆ ನೀಡಿಲ್ಲ. ಅಂಡರ್‌ ಪಾಸ್‌, ಫ್ಲೈ ಓವರ್‌ ನಿರ್ಮಾಣ ಮಾಡಿಲ್ಲ. ಹೀಗೆ ಕಂಪನಿ ವಿರುದ್ಧ ದೊಡ್ಡ ಆರೋಪ ಪಟ್ಟಿಯೇ ಇದೆ.

    ಸಚಿವರು ಗರಂ

    ಎನ್‌ಎಚ್‌-66 ನ ಈ ಅವ್ಯವಸ್ಥೆಯ ವಿರುದ್ಧ ಈ ಹಿಂದೆ ಕೆಲ ಸಂಘಟನೆಗಳು ಮಾತ್ರ ಧ್ವನಿ ಎತ್ತಿದ್ದವು. ಆಗಿನ ಕಾರವಾರ ಶಾಸಕಿ ರೂಪಾಲಿ ನಾಯ್ಕ ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದರು. ಆದರೆ, ಕಂಪನಿ ಕ್ಯಾರೇ ಎಂದಿರಲಿಲ್ಲ.

    ಈಗ ನೂತನ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಕಾರವಾರ ಶಾಸಕ ಸತೀಶ ಸೈಲ್‌ ಕಂಪನಿ ವಿರುದ್ಧ ತಿರುಗಿ ನಿಂತಿದ್ದಾರೆ. ಭಟ್ಕಳ ಹಾಗೂ ಕಾರವಾರದಲ್ಲಿ ಸಭೆ ಮಾಡಿದ್ದ ಸಚಿವರು ಐಆರ್‌ಬಿ ಅಧಿಕಾರಿಗಳನ್ನು ಬೆಂಡೆತ್ತಿದ್ದರು. ಟೋಲ್‌ ಬಂದ್‌ ಮಾಡಿ ಎಂದು ಸೂಚಿಸಿದ್ದರು. ಸುರಕ್ಷತಾ ಪ್ರಮಾಣಪತ್ರ ಪಡೆಯದ ಕಾರವಾರ-ಬಿಣಗಾ ಸುರಂಗ ಬಂದ್‌ ಮಾಡಿಸಿದ್ದರು.

    NH-66-at-Bhatkal.

    ಕಾರವಾರ ಶಾಸಕ ಸತೀಶ ಸೈಲ್‌ ಹಾಗೂ ಕಾಂಗ್ರೆಸ್‌ ಮುಖಂಡರು ಬೇಲೆಕೇರಿ ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಕೆಲ ಘಂಟೆ ಟೋಲ್‌ ಶುಲ್ಕ ವಸೂಲಿ ತಡೆಯಲು ಯಶಸ್ವಿಯಾಗಿದ್ದರು. ಈ ಎಲ್ಲ ಘಟನೆಗಳ ಬಳಿಕ ಸಚಿವರ ಸೂಚನೆಯಂತೆ ಅಧಿಕಾರಿಗಳೀಗ ಪರಿಶೀಲನೆಗೆ ಹೊರಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts