

ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಮುಕ್ತಗೊಳಿಸುವ ಚರ್ಚೆ ಆಗಾಗ ಪರಿಸರಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದ್ದರೆ, ಇತ್ತೀಚೆಗೆ ಈ ರಸ್ತೆಯಲ್ಲಿ ಷಟ್ಪಥ ಸುರಂಗ ಮಾರ್ಗ ನಿರ್ಮಾಣ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯೇ ಎಂಬ ಆತಂಕ ಪರಿಸರವಾದಿಗಳಲ್ಲಿ ಮೂಡಿದೆ.
ಇತ್ತೀಚೆಗೆ ಕೇರಳದ ಸಂಸದರೊಬ್ಬರು ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿದ ನಂತರ ಈ ಬಗ್ಗೆ ಕೇಂದ್ರ ಸರ್ಕಾರ ಕಳೆದ 15 ವರ್ಷಗಳಿಂದ ಜಾರಿಯಲ್ಲಿರುವ ರಾತ್ರಿ ಸಂಚರ ನಿಷೇಧದಿಂದಾಗಿರುವ ಸಮಸ್ಯೆಗಳ ಬಗ್ಗೆ ವರದಿ ಕೇಳಿರುವುದಾಗಿ ಮಲೆಯಾಳಿ ಮಾಧ್ಯಮವೊಂದು ವರದಿ ಮಾಡಿರುವುದು ಹಲವು ಚರ್ಚೆ ಉಂಟುಮಾಡಿದೆ.
ಕೇರಳದ ವಯನಾಡಿನ ಉಪಚುನಾವಣೆ ಸಂದರ್ಭದಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದರು. ನಂತರ ಉಪಚುನಾವಣೆಯಲ್ಲಿ ಜಯಗಳಿಸಿದ ಸಂಸದೆ ಪ್ರಿಯಾಂಕಾ ಗಾಂಧಿ ರಾತ್ರಿ ಸಂಚಾರಕ್ಕೆ ಮುಕ್ತಗೊಳಿಸುವುದೇ ತಮ್ಮ ಗುರಿ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಷಟ್ಪಥ ಸುರಂಗ ಮಾರ್ಗ ನಿರ್ಮಾಣ ಬಗ್ಗೆ ಆಸಕ್ತಿ ತೋರಿಸಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.