ನರವೈಜ್ಞಾನಿಕ ಅಸ್ವಸ್ಥತೆಗೆ ಅನುಕಂಪದ ಬದಲು ಸಹಾನುಭೂತಿ ಬೇಕು; ಮನಃಶಾಸ್ತ್ರಜ್ಞೆ ಪಲ್ಲವಿ ಅಡಿಗ ಸಲಹೆ

WEB
Published on

ತುಮಕೂರು: ನರವೈಜ್ಞಾನಿಕ ಅಸ್ವಸ್ಥತೆಗಳ ಪ್ರಕರಣ ಪರಿಶೀಲಿಸಿ, ವ್ಯಕ್ತಿಯ ನಡವಳಿಕೆಗಳಲ್ಲಿನ ಬದಲಾವಣೆ ಗುರುತಿಸಿ, ಪುನರ್ವಸತಿ ತಂಡದ ಜತೆ ಸಮಾಲೋಚನೆಗೆ ಶಿಫಾರಸು ಮಾಡಬೇಕು ಎಂದು ವಿಜಯಪುರದ ರಾಜಪಾಲ್ ಆರೋಗ್ಯ ಕೇಂದ್ರದ ಮನಃಶಾಸ್ತ್ರಜ್ಞೆ ಪಲ್ಲವಿ ಅಡಿಗ ಸಲಹೆ ನೀಡಿದರು.

ತುಮಕೂರು ವಿವಿ ಸ್ನಾತಕೋತ್ತರ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗ ಶನಿವಾರ ಆಯೋಜಿಸಿದ್ದ `ನರವೈಜ್ಞಾನಿಕ ಅಸ್ವಸ್ಥತೆಗಳು ಮಕ್ಕಳ ಮತ್ತು ಹಿರಿಯ ನಾಗರಿಕರ ಪ್ರಕರಣ'ಗಳು ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ನರವೈಜ್ಞಾನಿಕ ಅಸ್ವಸ್ಥತೆಗೆ ಒಳಗಾಗಿರುವ ರೋಗಿಯ ಮೇಲೆ ಅನುಕಂಪದ ಬದಲು ಸಹಾನುಭೂತಿ ಇರಬೇಕು. ವೈಯಕ್ತಿಕ ಸಂಪರ್ಕವಿಟ್ಟುಕೊಂಡು ಅಸ್ವಸ್ಥತೆ ವಿಶ್ಲೇಷಿಸಬಾರದು ಎಂದರು.

ವೃತ್ತಿಪರರಾಗಿ ಯಾವುದೇ ಮನೋರೋಗ ಕಾಣುವುದು ಸೂಕ್ತ. ವ್ಯಕ್ತಿಯ ನಡವಳಿಕೆಯಿಂದ, ಸಮಾಲೋಚನೆಯಿಂದ ಪ್ರಾಥಮಿಕವಾಗಿ ಅಸ್ವಸ್ಥತೆಯ ಲಕ್ಷಣ ಗುರುತಿಸಬಹುದು. ರಕ್ತ ಪರೀಕ್ಷೆ, ಎಂಆರ್‌ಐ ಸ್ಕ್ಯಾನಿಂಗ್ ಮೂಲಕವಷ್ಟೇ ನರವೈಜ್ಞಾನಿಕ ಅಸ್ವಸ್ಥತೆಯನ್ನು ದೃಢೀಕರಿಸಬಹುದು ಎಂದರು.

ಪುನರ್ವಸತಿ ಕೇಂದ್ರ ಮನೋರೋಗಿ ಗುಣಪಡಿಸುವ ಹಂತವಾಗಿ ಕಾರ್ಯನಿರ್ವಹಿಸುತ್ತದೆ. ನರವೈಜ್ಞಾನಿಕ ಅಸ್ವಸ್ಥತೆಗೆ ಫಿಸಿಯೋಥೆರಪಿಯೊಂದಿಗೆ ಆಪ್ತಸಮಾಲೋಚನೆಯ ಅಗತ್ಯ ಹೆಚ್ಚಿದೆ. ನರವೈಜ್ಞಾನಿಕ ಅಸ್ವಸ್ಥತೆಯು ಮುಖ್ಯವಾಗಿ ಮೆದುಳಿಗೆ ಸಂಬಂಧಿಸಿದ್ದರಿಂದ ಅರಿವು, ಭಾವನೆ, ಪ್ರಜ್ಞೆಯ ಮೇಲೆ ಆಗುವ ಸೂಕ್ಷ್ಮ ಪರಿಣಾಮಗಳನ್ನು ಮನಃಶಾಸ್ತ್ರಜ್ಞರು ಸಮಾಲೋಚಿಸಿ, ದೈನಂದಿನ ಜೀವನ ಮರಳಿ ಪಡೆಯಲು ಸಹಾಯವಾಗಲಿದೆ ಎಂದರು.

ನರವೈಜ್ಞಾನಿಕ ಅಸ್ವಸ್ಥತೆಗೆ ಒಳಗಾಗುವ ಮಕ್ಕಳು ಮತ್ತು ಹಿರಿಯ ನಾಗರಿಕರಲ್ಲಿ ಕಂಡುಬರುವ ನಡವಳಿಕೆಯ ವ್ಯತ್ಯಾಸಗಳನ್ನು, ಅಗತ್ಯವಿರುವ ಆಪ್ತಸಮಾಲೋಚನೆಯ ದಾಟಿಯನ್ನು, ನೀಡಬೇಕಾದ ಔಷಧ ಪ್ರಮಾಣವನ್ನು ವಿಶ್ಲೇಷಿಸಿ ನೀಡಬೇಕು ಎಂದರು.

ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಕಲಿಕೆಯ ಯುಗದಲ್ಲಿ ನಾವಿದ್ದೇವೆ ಸಂಶೋಧನಾಧಾರಿತ ಕಲಿಕೆಯಿಂದ ವಿಷಯದ ಆಳ, ಪ್ರಾಮುಖ್ಯತೆಯನ್ನು ಸಮಾಜಕ್ಕೆ ಪರಿಣಾಮಕಾರಿಯಾಗಿ ತಿಳಿಸಬಹುದು ಎಂದರು.

ಒತ್ತಡದ ಯುಗದಲ್ಲಿ ಸೇವಿಸುವ ಗಾಳಿ, ಓದುವ ಪುಸಕ್ತ ಪತ್ರಿಕೆಗಳಲ್ಲಿನ ವಿಷಯಗಳು, ಚರ್ಚಿಸುವ ವಿಷಯ, ಮೊಬೈಲ್ ಬಳಕೆ, ಕುಟುಂಬದೊಂದಿಗಿನ ಸಂಬಂಧ, ಆಪ್ತರೊಂದಿಗಿನ ಒಡನಾಟ, ಈ ಎಲ್ಲವೂ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಸಕಾರಾತ್ಮಕ ಅಂಶಗಳನ್ನು ತೆಗೆದುಕೊಂಡಾಗ ಯಾವುದೇ ಅಸ್ವಸ್ಥತೆಗೆ ಒಳಗಾಗುವುದಿಲ್ಲ ಎಂದರು.

ವಿಜಯಪುರದ ರಾಜಪಾಲ್ ಆರೋಗ್ಯ ಕೇಂದ್ರದ ನಿರ್ದೇಶಕ ಸಿ.ಎಚ್.ರಾಜೇಶ್, ವಿವಿ ಸ್ನಾತಕೋತ್ತರ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಂಯೋಜಕ ಪ್ರೊ.ಕೆ.ಜಿ.ಪರಶುರಾಮ್, ಉಪನ್ಯಾಸಕ ಬಿ.ಎನ್.ಅಂಕ್ಲೇಶ್, ಯು.ಕಾವ್ಯ, ವಿ.ಗಾಯತ್ರಿ, ಪಿ.ಎಲ್.ವಿನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net