ಅತಿಯಾದ ಮೊಬೈಲ್​ ಬಳಕೆಯಿಂದಾಗುವ ದುಷ್ಪರಿಣಾಮ ?

Red_Cross
Published on

ತುಮಕೂರು: ಅತಿಯಾದ ಮೊಬೈಲ್​ ಬಳಕೆ ಮಾಡುವುದರಿಂದ ಕುರುಡು ಮತ್ತು ಕಿವುಡುತನ ಚಿಕ್ಕ ವಯಸ್ಸಿನಲ್ಲಿಯೇ ಕಾಡುತ್ತಿದೆ ಎಂದು ಡಫ್​ ಚಿಲ್ಡ್ರನ್​ ಫೌಂಡೇಶನ್​ನ ಕಾರ್ಯಕ್ರಮ ವ್ಯವಸ್ಥಾಪಕ ವೈ.ಎಸ್​.ವೀರೇಶ್​ ಹೇಳಿದರು.

ನಗರದ ವಿಶ್ವವಿದ್ಯಾಲಯ ಕಲಾ ಕಾಲೇಜಿನಲ್ಲಿ ಯುವ ರೆಡ್​ ಕ್ರಾಸ್​ ಮತ್ತು ರೆಡ್​ ರಿಬ್ಬನ್​ ಕ್ಲಬ್​ ಬುಧವಾರ ಆಯೋಜಿಸಿದ್ದ ಉಚಿತ ಕಣ್ಣು ಮತ್ತು ಕಿವಿ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ತರಗತಿಗಳಲ್ಲಿ, ಹಾಗೂ ಬಿಡುವಿನ ವೇಳೆಯಲ್ಲೆಲ್ಲ ಮೊಬೈಲ್​ಗಳನ್ನು ಬಳಸುತ್ತಿರುವುದು ಕಳವಳಕಾರಿ ಎಂದರು.

ಈ ಹಿಂದೆ 70-80 ವಯಸ್ಸಿನವರಿಗೆ ಕಾಡುತ್ತಿದ್ದ ಕಿವುಡುತನ ಹಾಗೂ ಅಂಧತ್ವ ಈಗ 10-15ನೇ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಹೆಚ್ಚಿನ ಶಬ್ದಮಾಲಿನ್ಯ ಮತ್ತು ಧ್ವನಿ ಉಪಕರಣಗಳ ಅತಿಯಾದ ಬಳಕೆ. ನವಜಾತ ಶಿಶುಗಳಲ್ಲು ಈ ಸಮಸ್ಯೆ ಹೆಚ್ಚುತ್ತಿದೆ. ಮಕ್ಕಳಿಗೆ ಐದು ವರ್ಷದೊಳಗೆ ಕಿವಿ ಕೇಳಿಸದಿದ್ದರೆ ಅವರು ಮಾತನಾಡುವುದನ್ನು ಕಲಿಯುವುದಿಲ್ಲ. ಹಾಗಾಗಿ, ಮಕ್ಕಳ ಶ್ರವಣ ನ್ಯೂನತೆಯನ್ನು ಸೂಕ್ತ ಸಂದರ್ಭದಲ್ಲಿ ವೈದ್ಯರಿಗೆ ತೋರಿಸಿ ಪರಿಹಾರ ಕಂಡುಕೊಳ್ಳುವಂತೆ ಸಲಹೆನೀಡಿದರು.

ಪಂಚೇಂದ್ರಿಯಗಳಲ್ಲಿ ಕಣ್ಣು ಮತ್ತು ಕಿವಿ ಅತ್ಯಂತ ಪ್ರಮುಖವಾದವು. ಇವುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು, ಒಂದುವೇಳೆ ಇವುಗಳಿಗೆ ತೊಂದರೆಯಾದರೆ ನಾವು ಪರರನ್ನ ಅವಲಂಬಿಸಬೇಕಾಗುತ್ತದೆ ಎಂದು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಹೇಳಿದರು.

ಕಾರ್ಯಕ್ರಮದಲ್ಲಿ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಣ್ಣು ಮತ್ತು ಕಿವಿ ತಪಾಸಣೆ ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಿವಣ್ಣ, ವಿಶ್ವವಿದ್ಯಾಲಯದ ಯುವ ರೆಡ್​ ಕ್ರಾಸ್​ ಮತ್ತು ರೆಡ್​ ರಿಬ್ಬನ್​ನ ಕಾರ್ಯಕ್ರಮ ಸಂಯೋಜಕಿ ಡಾ. ಪಲ್ಲವಿ ಎಸ್​. ಕುಸುಗಲ್ಲ, ವಾಸನ್​ ಐ ಕೇರ್​ ನ ಮಾರ್ಕೆಟಿಂಗ್​ ಮ್ಯಾನೇಜರ್​ ನಾಗರಾಜ್​, ರೆಡ್​ಕ್ರಾಸ್​ ಘಟಕದ ಸದಸ್ಯರಾದ ಮಂಜುಳಾದೇವಿ, ರಾಮು, ಡೈಸನ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net