ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಮಠದ ಸ್ಪರ್ಶ

Station
Published on

ವಿಶೇಷ ವರದಿ

ತುಮಕೂರು: ತ್ರಿವಿಧ ದಾಸೋಹದ ಮಹಾಮನೆ ಸಿದ್ದಗಂಗಾ ಮಠದ ಮಾದರಿಯಲ್ಲೇ ತುಮಕೂರಿನ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅಮೃತ್​ ಭಾರತ್​ ಯೋಜನೆಯಡಿ ತುಮಕೂರು ರೈಲ್ವೆ ನಿಲ್ದಾಣವನ್ನು 120 ಕೋ.ರೂ., ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದ್ದು ಈಗಾಗಲೇ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವಂತೆ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣವನ್ನು ಶ್ರೀಮಠದ ಮಾದರಿಯಲ್ಲಿ ವಿನ್ಯಾಸಗೊಳಿಸುತ್ತಿರುವುದು ವಿಶೇಷವೆನಿಸಿದೆ.

ಬೆಂಗಳೂರಿನ ಕಂಟೋನ್ಮೆಂಟ್​, ಯಶವಂತಪುರ ವ್ಯವಸ್ಥಿತ ರೈಲ್ವೆ ನಿಲ್ದಾಣಗಳಂತೆ ತುಮಕೂರಿನ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ. ಇದಲ್ಲದೆ, ರಾಜ್ಯದ 61 ರೈಲ್ವೆ ನಿಲ್ದಾಣಗಳನ್ನು ಒಟ್ಟು 2 ಸಾವಿರ ಕೋಟಿ ರೂ., ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ಗ್ರೀನ್​ ಸಿಗ್ನಲ್​ ತೋರಿದೆ.

ಸುಸಜ್ಜಿತ ರೈಲ್ವೆ ನಿಲ್ದಾಣ: ರೈಲ್ವೆ ಖಾತೆ ರಾಜ್ಯ ಸಚಿವರು ಆದ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯ ವಿ.ಸೋಮಣ್ಣ ಪ್ರತಿನಿಧಿಸುವ ಕ್ಷೇತ್ರದ ಈ ರೈಲ್ವೆ ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಲಾಂತರ ಬಡಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿದ ಸಿದ್ದಗಂಗಾ ಮಠದ ಮಾದರಿಯನ್ನೇ ಹೋಲುವಂತೆ ರೈಲ್ವೆ ನಿಲ್ದಾಣ ಕಟ್ಟಡ ವಿನ್ಯಾಸ ಇರಲಿದೆ.

ರೈಲ್ವೆ ನಿಲ್ದಾಣದಲ್ಲಿ ಬಹುಹಂತದ ಪಾರ್ಕಿಂಗ್​ ವ್ಯವಸ್ಥೆ ಇರಲಿದೆ. ಪ್ರಯಾಣಿಕರ ಅತ್ಯಾಧುನಿಕ ಲಾಂಜ್​ಗಳು, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಒಳಗೊಂಡಿರುತ್ತದೆ. ರೈಲು ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ನವೀಕರಣಗೊಂಡು ಬಹು ಹಂತದ ಪಾರ್ಕಿಂಗ್​ ವ್ಯವಸ್ಥೆ, ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಪ್ಲಾಟ್​ಫಾಮ್​ರ್ಗಳನ್ನು ನಿರ್ಮಿಸಲಾಗುತ್ತಿದೆ

ಶ್ರವಣಬೆಳಗೊಳ ನಿಲ್ದಾಣಕ್ಕು ಹೊಸ ಸ್ಪರ್ಶ

ರಾಜ್ಯದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿರುವ 61 ರೈಲ್ವೆ ನಿಲ್ದಾಣಗಳನ್ನು ಅಮೃತ್​ ಭಾರತ್​ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ 2 ಸಾವಿರ ಕೋ.ರೂ., ಅನುದಾನ ವ್ಯಯಿಸಲಾಗುವುದು. ತುಮಕೂರು ಅಲ್ಲದೆ, ಹಾಸನ ಜಿಲ್ಲೆಯ ಶ್ರವಣಬೆಳಗೊಳ ರೈಲ್ವೆ ನಿಲ್ದಾಣವನ್ನು 9 ಕೋಟಿ ರೂ., ಹಾಗೂ ಗುಬ್ಬಿ ರೈಲ್ವೆ ನಿಲ್ದಾಣವನ್ನು 7 ಕೋಟಿ ರೂ., ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುವುದು.

ಕ್ಯಾತಸಂದ್ರಕ್ಕೆ ಸಿದ್ದಗಂಗಾ ನಿಲ್ದಾಣ

ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗೆಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವಂತೆ ಒತ್ತಾಯ ಬಂದಿವೆ. ಹಾಗೆಯೇ ಕ್ಯಾತಸಂದ್ರ ನಿಲ್ದಾಣಕ್ಕೆ ಸಿದ್ದಗಂಗಾ ನಿಲ್ದಾಣ ಎಂದು ಹೆಸರಿಡುವಂತೆಯೂ ಪತ್ರಗಳು ಬಂದಿವೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.

ಎಕ್ಸ್​ನಲ್ಲಿ ಸೋಮಣ್ಣ ಪೋಸ್ಟ್​ ಹಂಚಿಕೆ

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ " ತುಮಕೂರು ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ನವೀಕರಣಗೊಳ್ಳುವ ನಿಲ್ದಾಣಲ್ಲಿ ಬಹುಹಂತದ ಪಾರ್ಕಿಂಗ್​ ವ್ಯವಸ್ಥೆ, ಆಧುನಿಕ ಪ್ರಯಾಣಿಕರ ಲಾಂಜ್​ಗಳು, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಇರಲಿವೆ. ಅದಲ್ಲದೇ, ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ್ಲಾಟ್​ಾಮ್​ರ್ಗಳನ್ನು ನಿರ್ಮಿಸಲಾಗತ್ತದೆ' ಎಂದು ಟ್ವೀಟಿಸಿದ್ದಾರೆ.

ಸ್ವಯಂ ಚಾಲಿತ ಸಿಗ್ನಲ್​ ವ್ಯವಸ್ಥೆ

ನೈರುತ್ಯ ರೈಲ್ವೆ ವಲಯದಲ್ಲೇ ಮೊದಲು ಎಂಬಂತೆ ತುಮಕೂರು&-ಅರಸೀಕೆರೆ ಮಾರ್ಗದಲ್ಲಿ ಸ್ವಯ ಚಾಲಿತ ಸಿಗ್ನಲ್​ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ನಿರ್ಮಾಣಕ್ಕಾಗಿ 220 ಕೋಟಿ ರೂ. ವೀಸಲಿಡಲಾಗಿದೆ. ಯಶವಂತಪುರ& ಅರಸೀಕೆರೆ ನಡುವೆ ಒಟ್ಟು 165.86 ಕಿ.ಮೀ., ಮಾರ್ಗವನ್ನು ಸಿಗ್ನಲ್​ ಫ್ರೀ ಮಾಡಲಾಗುತ್ತಿದೆ. ಯಶವಂತಪುರ& ಸಂಪಿಗೆ ರೋಡ್​ (107.21 ಕಿ.ಮೀ.,) ಹಾಗೂ ಸಂಪಿಗೆ ರೋಡ್​& ಅರಸೀಕೆರೆ (58.65 ಕಿ.ಮೀ.,) ಒಟ್ಟು 165 ಕಿ.ಮೀ., ಮಾರ್ಗದಲ್ಲಿ ಸ್ವಯಂ ಚಾಲಿನ ಸಿಗ್ನಲ್​ ವ್ಯವಸ್ಥೆ ನಿರ್ಮಾಣ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net