

ತುಮಕೂರು: ತುಮಕೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಅಂಬಾರಿ ಹೊರಲಿರುವ ಕೊಡುಗು ಜಿಲ್ಲೆಯ ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರದ ಶ್ರೀರಾಮ ನಗರದಲ್ಲಿ ಶುಕ್ರವಾರ ನಡೆದ ತಾಲೀಮಿನಲ್ಲಿ "ಗಜಗಾಂಭೀರ್ಯ'ದಿಂದ ಹೆಜ್ಜೆ ಹಾಕಿದ.
ಅ.2 ರಂದು ನಡೆಯಲಿರುವ ನಡೆಯಲಿರುವ ಜಂಬೂಸವಾರಿಯಲ್ಲಿ 180 ರಿಂದ 200 ಕೆಜಿ ತೂಕದ ಅಂಬಾರಿ ಹೊರಲಿರುವ ಶ್ರೀರಾಮ ಈ ಹಿಂದೆ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದ. ಗುರುವಾರ ತುಮಕೂರಿಗೆ ದುಬಾರೆ ಆನೆ ಶಿಬಿರದಿಂದ ಬಂದ 4500 ಕೆಜಿ ತೂಕದ 39 ವರ್ಷದ ಶ್ರೀರಾಮನನ್ನು ಸಂಪ್ರದಾಯಬದ್ಧವಾಗಿ ಬರಮಾಡಿಕೊಳ್ಳಲಾಯಿತು.
3 ದಿನಗಳ ತಾಲೀಮು: ತುಮಕೂರು ದಸರಾ ಅಂಬಾರಿ ಹೊರಲಿರುವ ಶ್ರೀರಾಮನ ಜತೆಗೆ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ, ತಿಪಟೂರು ತಾಲೂಕು ಕಾಡುಸಿದ್ದೇಶ್ವರ ಮಠದ ಲಕ್ಷ್ಮೀ ಆನೆಗಳು ತಾಲೀಮಿನಲ್ಲಿ ಹೆಜ್ಜೆ ಹಾಕಿದವು. ನಗರದ ಟೌನ್ ಹಾಲ್ ನಿಂದ ಅಶೋಕರಸ್ತೆ ಮೂಲಕ ಕೋಟೆ ಆಂಜನೇಯ ವೃತ್ತ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದವರೆಗೆ ಮೊದಲದಿನದ ತಾಲೀಮು ನಡೆಯಿತು. ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಶಶಿಧರ್, ಎಸಿಎಫ್ ಪವಿತ್ರ, ಆರ್ಎಫ್ಒ ನಮಿತಾ, ಡಿಆರ್ಎಫ್ಒ ರಬ್ಬಾನಿ, ಪಶುವೈದ್ಯಾಧಿಕಾರಿಗಳಾದ ಡಾ.ರಮೇಶ್, ಡಾ.ಶ್ರೀಧರ್ ಮತ್ತಿತರರ ಅರಣ್ಯ ಇಲಾಖೆ ಸಿಬ್ಬಂದಿ ತಾಲೀಮಿನಲ್ಲಿ ಭಾಗವಹಿಸಿದ್ದರು.
ಭಾನುವಾರ "ಅಂಬಾರಿ' ತಾಲೀಮು
ಭಾನುವಾರ ಶ್ರೀರಾಮನ ಮೇಲೆ 180 ರಿಂದ 200 ಕೆಜಿ ತೂಕದ "ಅಂಬಾರಿ' ಕಟ್ಟಿ ತಾಲೀಮು ನಡೆಸಲಾಗುವುದು. ಜನ, ವಾಹನ ದಟ್ಟಣೆ ಸಹಿತ ಆನೆಗಳ ತಾಲೀಮು ನಡೆಸಲಿದ್ದು "ಶ್ರೀರಾಮ'ನಿಗೆ ಜಿಲ್ಲಾಡಳಿತದಿಂದ ಕೊಂಚವು ಕೊರತೆಯಾಗದಂತೆ "ಆತಿಥ್ಯ' ಕೊಡಲಾಗುವುದು.
28 ರಂದು ಸಂಜೆ ಪಂಜಿನ ಕವಾಯತು
ಈ ಬಾರಿಯ ದಸರಾ ಉತ್ಸವದ ವಿಶೇಷ ಪಂಜಿನ ಕವಾಯತು. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೆ.28ರಂದು ಸಂಜೆ 7ಕ್ಕೆ ಪಂಜಿನ ಕವಾಯತು ಪ್ರದರ್ಶನ ನಡೆಯಲಿದ್ದು 240 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕಳೆದೊಂದು ತಿಂಗಳಿನಿಂದ ನಿರಂತರ ಅಭ್ಯಾಸ ನಡೆಸಿರುವ ವಿದ್ಯಾರ್ಥಿಗಳು ಭಾನುವಾರ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಪಂಜಿನ ಕವಾಯತು ಪ್ರದರ್ಶನಕ್ಕು ಮುನ್ನ ಕ್ರೀಡಾಂಗಣದಲ್ಲಿ ಸರಿಗಮಪ ಖ್ಯಾತಿಯ ಜಿಲ್ಲೆಯ ಪ್ರತಿಭೆ ಕಂಬದ ರಂಗಯ್ಯ ಸಂಜೆ 4 ಗಂಟೆಗೆ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.