6 ತಿಂಗಳಿಗೆ ಪ್ರಭಾವತಿ ತುಮಕೂರು ಮೇಯರ್ !

Mayor_1
Published on

ತುಮಕೂರು

ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ರಾಜಕೀಯ ಜಾಣ್ಮೆ ನಡೆ ತೋರಿರುವ ಕಾಂಗ್ರೆಸ್ ಪಕ್ಷವು ತಲಾ 6 ತಿಂಗಳ ಅವಧಿಗೆ ಪರಿಶಿಷ್ಟ ಜಾತಿಯ ‘ಎಡಗೈ-ಬಲಗೈ’ ಪಂಗಡಗಳಿಗೆ ಅಧಿಕಾರ ಹಂಚುವ ಸೂತ್ರಕ್ಕೆ ಅಂಟಿಕೊಂಡಿದೆ. ಮೊದಲ ಅವಧಿಗೆ ದಲಿತ ಸಮುದಾಯದ ಬಲಗೈ ಪಂಗಡದ ಎಂ.ಪ್ರಭಾವತಿ ಅವರನ್ನು ಮೇಯರ್ ಸ್ಥಾನದ ಅಭ್ಯರ್ಥಿಯನ್ನಾಗಿ ಕೈ ಮುಖಂಡರು ಆಯ್ಕೆ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಸೆ.9 ರಂದು ಮೇಯರ್ (ಎಸ್ಸಿ ಮಹಿಳೆ), ಉಪಮೇಯರ್ (ಹಿಂದುಳಿದ ವರ್ಗ ಎ) ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಪಕ್ಷದಲ್ಲಿ 9ನೇ ವಾರ್ಡ್‌ನ ಎಂ.ಪ್ರಭಾವತಿ ಹಾಗೂ 19ನೇ ವಾರ್ಡ್‌ನ ಬಿ.ಎಸ್.ರೂಪಶ್ರೀ ಪ್ರಬಲ ಆಕಾಂಕ್ಷಿಗಳಾಗಿದ್ದು ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಾತಿ ಸೂಕ್ಷ್ಮತೆ ಲೆಕ್ಕಾಚಾರಗಳನ್ನು ಹಾಕಿರುವ ಕಾಂಗ್ರೆಸ್ ಮುಖಂಡರು ಎರಡೂ ಸಮುದಾಯಕ್ಕೂ ಅನ್ಯಾಯವಾಗದಂತೆ ಸಮಾನಾವಧಿಯ ಅಧಿಕಾರ ಕಲ್ಪಿಸುವ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ.

ಮತ್ತೆ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ‘ದೋಸ್ತಿ’ ಅಸ್ತಿತ್ವಕ್ಕೆ ಬರಲಿದ್ದು ಉಪಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಜೆಡಿಎಸ್‌ನಲ್ಲಿ ಪ್ರಬಲ ಪೈಪೋಟಿಯಿದ್ದು 23ನೇ ವಾರ್ಡ್‌ನ ತಿಗಳ ಜನಾಂಗದ ಟಿ.ಕೆ.ನರಸಿಂಹಮೂರ್ತಿ ಅವರನ್ನು ಉಪಮೇಯರ್ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಶುಕ್ರವಾರ ಮೇಯರ್ , ಉಪಮೇಯರ್ ಚುನಾವಣೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net