ಜಿಪಂ ಸೂಪರ್​ಸೀಡ್​ಗೆ ಶಿಫಾರಸು ಎಚ್ಚರಿಕೆ ನೀಡಿದ ಸಚಿವ ಜೆಸಿಎಂ!

JCM_ZP
Published on

ತುಮಕೂರು: ಜಿಪಂ ಸದಸ್ಯರು ಜಿಲ್ಲೆಯ ಅಭಿವೃದ್ಧಿಗೆ ತುರ್ತಾಗಿ ಆಗಬೇಕಿರುವ ಲಿಂಕ್ ಡಾಕ್ಯೂಮೆಂಟ್, ಕ್ರಿಯಾಯೋಜನೆಗಳಿಗೆ ನ.20ರಂದು ಕರೆದಿರುವ ಸಾಮಾನ್ಯಸಭೆಯಲ್ಲಿ ಒಪ್ಪಿಗೆ ನೀಡದಿದ್ದರೆ ಸೂಪರ್‌ಸೀಡ್‌ಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನೀಡಿದ ಎಚ್ಚರಿಕೆ ಅಚ್ಚರಿ ಮೂಡಿಸಿತು.

ನಗರದ ಜಿಪಂ ಸಭಾಂಗಣದಲ್ಲಿ ಇಂದು ನಡೆದ 2ನೇ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರಸ್ತುತ ಜಿಲ್ಲೆಯಲ್ಲಿ 500 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಜಿಪಂ ಸಾಮಾನ್ಯಸಭೆಯ ಅನುಮೋದನೆ ಅಗತ್ಯವಿದೆ. ನ.20ರಂದು ನಡೆಯುವ ಸಭೆಯಲ್ಲಿ ಅನುಮೋದನೆ ನೀಡುವಂತೆ ಎಲ್ಲ ಸದಸ್ಯರಿಗೂ ನಾನೇ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದರು.

ಜಿಪಂ ಅಧ್ಯಕ್ಷೆ ಲತಾ ವಿರುದ್ಧ 48ಕ್ಕೂ ಹೆಚ್ಚು ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ನಂತರ ಜೆಡಿಎಸ್‌ನ ಲತಾ ಅವರ ಪತಿ ರವಿಕುಮಾರ್ ಶಿರಾ ಉಪಸಮರ ಸಂದರ್ಭದಲ್ಲಿ ಕಾಂಗ್ರೆಸ್ ಸೇರುವ ಮೂಲಕ ಅಧ್ಯಕ್ಷ ಗಾದಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಒಂದುವೇಳೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ನ.20ರಂದು ನಡೆಯುವ ಸಭೆಗೆ ಹಾಜರಾಗದೆ ಕೋರಂ ಕೊರತೆ ಎದುರಾದರೆ ಮತ್ತೆ ಲತಾ ಖುರ್ಚಿಗೆ ಕಂಟಕ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಂತಹ ರಾಜಕೀಯ ಸಂಕಷ್ಟ ಪರಿಸ್ಥಿತಿಯಲ್ಲಿ ಜೆಸಿಎಂ ಎಚ್ಚರಿಕೆ ಇನ್ನಷ್ಟು ಸೂಕ್ಷ್ಮತೆ ಪಡೆದುಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net