

ತುಮಕೂರು: ಕನ್ನಡದ ಮೊದಲ ಬಯೋಪಿಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯಸಂಕೇಶ್ವರ ಅವರ ಬದುಕಿನ ಯಶೋಗಾಥೆಯ ಸಿನಿಮಾ `ವಿಜಯಾನಂದ' ಶುಕ್ರವಾರ ತೆರೆಕಂಡಿದ್ದು ಮೊದಲ ದಿನ ಕಲ್ಪತರು ನಾಡು ತುಮಕೂರಿನಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.
ನಗರದ ಗಾಯತ್ರಿ ಚಿತ್ರಮಂದಿರ ಹಾಗೂ ಶಂಕರ್ ಮಾಲ್‌ನ್ನ ಐನಾಕ್ಸ್ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳ ಚಿತ್ರಮಂದಿರದಲ್ಲಿಯೂ ಸಿನಿಮಾ ತೆರೆಕಂಡಿದ್ದು ಮೊದಲ ದಿನವೇ ಸಿನಿಮಾ ನೋಡಿದ ಜನರು ಚಿತ್ರದ ಬಗ್ಗೆ ಮಚ್ಚುಗೆ ಸೂಚಿಸಿದರು.
ತುಮಕೂರಿನ ಗಾಯತ್ರಿ ಚಿತ್ರಮಂದಿರ ಮುಂಭಾದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಡಾ.ವಿಜಯಸಂಕೇಶ್ವರ ಅಭಿಮಾನಿ ಬಳಗದ ಯುವಕರು ಬೃಹತ್ ಕಟೌಟ್ ಹಾಗೂ ಬ್ಯಾನರ್ ಹಾಕಿ ಸಂಭ್ರವಿಸಿದರು. ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಕೇಕ್ ಕತ್ತರಿಸಿ, ಪ್ರೇಕ್ಷಕರಿಗೆ ಸಿಹಿ ಹಂಚಿ ಚಿತ್ರವೀಕ್ಷಿಸಿದರು.
ಡಾ.ವಿಜಯ ಸಂಕೇಶ್ವರ ಅವರ ಜೀವನ ಆಧಾರಿತ ಚಿತ್ರದಲ್ಲಿ ಸಾಧನೆಯ ಹಾದಿಯ ಸವಾಲುಗಳು, ದೃಢ ನಿಲುವು, ಧೈರ್ಯ, ಪ್ರಾಮಾಣಿಕತೆ ಹಾಗೂ ಸತತ ಪ್ರಯತ್ನದ ಬಗ್ಗೆ ತಿಳಿಸಿದ್ದು ಯುವಜನರಿಗೆ ಸ್ಫೂರ್ತಿ ನೀಡುವ ಅಂಶಗಳಿವೆ ಎಂದು ಚಿತ್ರವೀಕ್ಷಿಸಿದವರು ಮೆಚ್ಚಿಕೊಂಡರು.
ಜಿಲ್ಲಾ ಪತ್ರಿಕಾ ವಿತರಕರ ಸಂಘದ ಚೆಲುವರಾಜು, ಎಸ್‌ಐಟಿ ಗಿರೀಶ್, ವಾಸುದೇವ, ಪ್ರಸಾದ್ ಜೈನ್, ರಮೇಶ್, ಸಿದ್ಧಪ್ಪ, ಎಚ್.ಪಿ.ಯೋಗೇಶ್, ನರಸಿಂಹಮೂರ್ತಿ, ಗಂಗಮುತ್ತಯ್ಯ, ಪದ್ಮಪ್ರಸಾದ್, ದಿಬ್ಬೂರು ರಾಜು, ಆರ್.ಸಿ.ನಾಗರಾಜು ಮತ್ತಿತರರು ಇದ್ದರು.