20ನೇ ಸ್ಥಾನದಲ್ಲಿ ತುಮಕೂರು, ವಿದ್ಯಾನಿಧಿಯ ಜ್ಞಾನವಿ ರಾಜ್ಯಕ್ಕೆ ಟಾಪರ್

PU_State_Rank
Published on

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.81.03 ಫಲಿತಾಂಶ ಪಡೆದು ತುಮಕೂರು ಜಿಲ್ಲೆ 20ಸ್ಥಾನಕ್ಕೆ ಜಿಗಿದಿದೆ. ನಗರದ ವಿದ್ಯಾನಿಧಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ.ಜ್ಞಾನವಿ 597 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಜಿಲ್ಲೆಯ ಕುಣಿಗಲ್ ತಾಲೂಕಿನ ಗಢಿಭಾಗವಾದ ಎಡೆಯೂರು ಸಮೀಪ ಮಂಡ್ಯ ಜಿಲ್ಲೆಯ ಬೀಚನಹಳ್ಳಿ ಮೂಲದ ಡಾಬಾ ನಡೆಸುತ್ತಿರುವ ಮಂಜುನಾಥ್, ಮಂಜುಳಾ ದಂಪತಿ ಪುತ್ರಿ ಜ್ಞಾನವಿ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿದ್ದಳು.

ಚಾರ್ಟಡ್ ಅಕೌಂಟೆಂಟ್ ಕನಸು: ಜ್ಞಾನವಿಗೆ ಚಾರ್ಟಡ್ ಅಕೌಂಟೆಂಟ್ ಆಗುವ ಕನಸಿದೆ. ಸಿಎ ಫೌಂಡೇಷನ್ ಕೋರ್ಸ್ ತೆಗೆದುಕೊಂಡಿದ್ದು ನನ್ನ ಇವತ್ತಿನ ಯಶಸ್ಸಿಗೆ ತಂದೆ-ತಾಯಿ, ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಬೆಂಬಲ, ಸಹಕಾರ ಪ್ರಮುಖವಾಗಿದೆ ಎಂದರು.

ಹಾಸ್ಟೆಲ್‌ನಲ್ಲಿ ಇದ್ದದ್ದರಿಂದ ಮೊಬೈಲ್ ಮುಟ್ಟಲು ಅವಕಾಶ ಇರಲಿಲ್ಲ. ಮೊಬೈಲ್ ಸಹವಾಸಕ್ಕೆ ಹೋಗುತ್ತಿರಲಿಲ್ಲ. ಬೆಳಗ್ಗೆ, ಸಂಜೆ ಕಾಲೇಜಿನಲ್ಲೇ ಓದಲು ಅವಕಾಶ ಇತ್ತು. ಮತ್ತೆ ಕಾಲೇಜಿನಲ್ಲಿ ಪ್ರಿಪ್ರೇರಟರಿ ಪರೀಕ್ಷೆ ಹೆಚ್ಚು ನಡೆಸಿದ್ದು ಉತ್ತಮ ಅಂಕಗಳಿಸಲು ನೆರವಾಯಿತು. ಈ ಮಟ್ಟದ ಸಾಧನೆಗೆ ಕಾಲೇಜು ಉಪನ್ಯಾಸಕ ವೃಂದವೇ ಕಾರಣ ಎನ್ನುವ ಜ್ಞಾನವಿಗೆ ಟಾಪರ್ ಆಗುವ ನಿರೀಕ್ಷೆ ಇತ್ತು. ಸಿಎ ಕೋರ್ಸ್ ಓದುವ ನಿಟ್ಟಿನಲ್ಲಿ ನಾನು ಈಗಾಗಲೇ ವಿದ್ಯಾವಾಹಿನಿ ಕಾಲೇಜಿನಲ್ಲಿ ಸಿಎ ಮತ್ತು ಬಿ.ಕಾಂ.,ಗೆ ಪ್ರವೇಶ ಪಡೆದಿದ್ದೇನೆ ಎಂದರು.

ಈಕೆ ಜತೆ ಕಾಲೇಜಿನ 8 ವಿದ್ಯಾರ್ಥಿಗಳು ಸಹ ರಾಜ್ಯಕ್ಕೆ ಟಾಪರ್‌ಗಳಾಗಿದ್ದಾರೆ. ದೀಪಶ್ರೀ 594, ತುಂಗಾ 593, ಮನಮೋಹನ್ 592, ಗಗನಶ್ರೀ 591, ಅನನ್ಯ ಜೆ.ಟಿ.591, ಮೋನಿಶಾ 590, ಸಾಕ್ಷಿ 590, ಕುಮುದಾ 589, ಮಾರುತಿ ಭುವನ್ 588, ವಿಜ್ಞಾನ ವಿಭಾಗದಲ್ಲಿ ನಿತ್ಯ ಕೆ.ಆರ್. 586, ಶಾಶ್ವತ್ 586, ತನುಷ್ ಆರಾಧ್ಯ 585, ನಿಸರ್ಗ ಎ.ಎಂ. 584, ಲತಾ ಆರ್. 584 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಬಿ. ಜಯಣ್ಣ, ಪ್ರಾಚಾರ್ಯ ಸಿದ್ದೇಶ್ವರಸ್ವಾಮಿ ಮತ್ತಿತರರು ಇದ್ದರು.

ವಿದ್ಯಾನಿಧಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಜ್ಞಾನವಿ ಸಾಧನೆಗೆ ಉಪನ್ಯಾಸಕ ವೃಂದದ ಶ್ರಮ ಇದೆ. ಮೊದಲ ಪಿಯುನಲ್ಲೇ ಆಕೆಯ ಪ್ರತಿಭೆ ಗುರುತಿಸಿ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿತ್ತು. ಎನ್.ಬಿ.ಪ್ರದೀಪ್‌ಕುಮಾರ್ಕಾರ್ಯದರ್ಶಿ, ವಿದ್ಯಾವಾಹಿನಿ ಸಮೂಯ ಶಿಕ್ಷಣ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net