ಹಸಿವಿನ ಅರಿವಿದ್ದವನು ಬದುಕು ಸಾರ್ಥಕ ಪಡಿಸಿಕೊಳ್ಳಬಲ್ಲ: ನ್ಯಾ.ಎಚ್.ಎನ್.ನಾಗಮೋಹನದಾಸ್

VV_Sankalpa
Published on

ತುಮಕೂರು: ಶಿಕ್ಷಣದ ಜತೆಗೆ ಜೀವನ ಕೌಶಲವನ್ನು ರೂಢಿಸಿಕೊಳ್ಳಬೇಕು. ಹಸಿವಿನ ಅರಿವಿದ್ದವನು ಬದುಕನ್ನು ಸಾರ್ಥಕ ಪಡಿಸಿಕೊಳ್ಳುತ್ತಾನೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸಂಕಲ್ಪ-2023 ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಂತರಾಳದ ಕೌಶಲವನ್ನು ಬೆಳೆಸುವಂತಹ ಕಾರ್ಯ ಶಿಕ್ಷಣ ಸಂಸ್ಥೆಗಳು ಕೈಗೊಳ್ಳಬೇಕು. ಎಲ್ಲರಲ್ಲೂ ಅನೇಕ ಕೌಶಲಗಳು ಅಡಗಿರುತ್ತವೆ ಎಂದರು.

ಮೇಲು, ಕೀಳು, ಬಡವ, ಶ್ರೀಮಂತ ಎನ್ನದೆ ಅವರಲ್ಲಿನ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕಿದೆ. ಎಲ್ಲರಿಗೂ ಸಮಾನ ಹಾಗೂ ಉನ್ನತ ಶಿಕ್ಷಣ ದೊರೆಯಬೇಕು. ಈಗ ಶಿಕ್ಷಣ ಕ್ಷೇತ್ರ ತಂತ್ರಜ್ಞಾನದ ಅಳವಡಿಕೆಯಲ್ಲಿ ಹಲವು ಹೊಸತನ್ನು ಕಾಣುತ್ತಿದೆ. ವಿದ್ಯಾವಂತರು ನಾಡಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮುನ್ನೆಲೆಗೆ ತಂದು ಮಣ್ಣಿನ ಇತಿಹಾಸವನ್ನು ಉಳಿಸಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಶಿಸ್ತುಬದ್ಧತೆಯಿಂದ ವಿದ್ಯಾರ್ಥಿಗಳು ಈ ಸಂಭ್ರಮವನ್ನು ಆಯೋಜಿಸಿದ್ದಾರೆ. ಅದ್ದೂರಿಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಶಿಕ್ಷಣದ ಜತೆಗೆ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ಕೌಶಲಗಳನ್ನು ಹೊಂದಬಹುದು. ಇದಲ್ಲದೆ, ಸಮಾಜದ ಜವಾಬ್ದಾರಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ತಿಳಿದುಕೊಂಡು ಮುಂದೆ ಸಾಗಬೇಕು ಎಂದರು.

ಶಿಕ್ಷಣದ ಜತೆಗೆ ಇಂತಹ ಸಂಭ್ರಮ, ಆಚರಣೆಗಳು ವಿದ್ಯಾರ್ಥಿಗಳಿಗೆ ಸಿಕ್ಕಾಗ ಅವರಲ್ಲಿ ಹೊಸ ಚೈತನ್ಯ ಮೂಡುತ್ತದೆ. ಒಂದು ಉತ್ತಮ ಜೀವನದ ಪಾಠವನ್ನು ಇಂತಹ ಸಂಭ್ರಮ ಚಟುವಟಿಕೆಗಳು ತಿಳಿಸಿಕೊಡುತ್ತವೆ ಎಂದು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸಿ. ಶೋಭಾ ಹೇಳಿದರು.

ವಾರ್ಷಿಕ ಸಂಚಿಕೆ ಸಂಕಲ್ಪ-2023 ಬಿಡುಗಡೆಮಾಡಲಾಯಿತು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಆರ್. ಸಿ. ನಾಗರಾಜು, ಡಾ. ವಿ.ವನಜಾಕ್ಷಿ , ಡಾ. ಸಲ್ಮಾ ಬಾನು, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಬಿ.ಸಿ.ಭಾನುನಂದನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net