

ತುಮಕೂರು: ತುಮಕೂರು ವಿವಿ ಒಂದು ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯಾಗಿ ದೇಶದಲ್ಲಿ ಹೆಸರು ಪಡೆಯಬೇಕು ಎಂಬ ಉದ್ದೇಶದೊಂದಿಗೆ ವಿವಿ ಸ್ಥಾಪಿಸಲಾಗಿತ್ತು. ಆದರೆ, ಆ ಉದ್ದೇಶ ಸಾಕಾರವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಬೇಸರಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಅನುದಾನದಿಂದ ತುಮಕೂರು ವಿವಿ ಬಿದರಕಟ್ಟೆ "ಜ್ಞಾನಸಿರಿ'ಯಲ್ಲಿ ನಿರ್ಮಿಸಲಾಗಿರುವ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನ ಕೇಂದ್ರದ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸವಾಗಬೇಕು. ದೇಶದಲ್ಲಿಯೇ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ವಿವಿಯಾಗಬೇಕಿದೆ ಎಂದರು.
ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಇದನ್ನು ಅನೇಕ ದಶಕಗಳ ಹಿಂದೆ ಮನಗಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಪ್ರತಿಯೊಬ್ಬ ನಾಗರಿಕನೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಅಂಶವನ್ನು ಸಂವಿಧಾನದಲ್ಲಿ ಸೇರಿಸಿದ್ದರು ಎಂದು ಪರಮೇಶ್ವರ್ ಸ್ಮರಿಸಿದರು.
ಗೆಲಿಲಿಯೋ, ಮೇರಿ ಕ್ಯೂರಿಯಂತಹ ದಾರ್ಶನಿಕ ವಿಜ್ಞಾನಿಗಳು ಭವಿಷ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಕಂಡ ಕನಸುಗಳು ಇಂದು ನನಸಾಗಿವೆ. ಕಂಪ್ಯೂಟರ್ ಜಗತ್ತನ್ನು ಆಳುತ್ತಿದೆ. ಕೃತಕ ಬುದ್ಧಿಮತ್ತೆ ಎಲ್ಲೆಡೆ ಪ್ರಭಾವ ಬೀರುತ್ತಿದೆ. ಆದರೆ ಇದರೊಂದಿಗೆ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ. ಯುವಜನತೆ ಇಂತಹ ಪ್ರವೃತ್ತಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದರು.
ಶಾಸಕ ಬಿ.ಸುರೇಶ್ಗೌಡ, ಜ್ಞಾನಸಿರಿ ಕ್ಯಾಂಪಸ್ಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಆದ್ದರಿಂದ ಬಿದರಕಟ್ಟೆಯ ಕೆರೆಗೆ ಹೇಮಾವತಿ ನದಿ ನೀರು ಹರಿಸುವ ವ್ಯವಸ್ಥೆ ಮಾಡಬೇಕು, ರಸ್ತೆ ಸೌಲಭ್ಯವನ್ನೂ ಅಭಿವೃದ್ಧಿಪಡಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಂದು ತಾರಾಲಯ (ಪ್ಲಾನೆಟೋರಿಯಂ) ನಿರ್ಮಿಸಿಕೊಡಬೇಕು. ಜ್ಞಾನಸಿರಿ ಕ್ಯಾಂಪಸ್ಗಾಗಿ ಕೇಂದ್ರದಿಂದ ಅನುದಾನ ತರುವ ಭರವಸೆ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಎಸ್.ಬೋಸರಾಜ್, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಗಳಿಗೇನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ದೇವರಾಜು, ನಾಗವಲ್ಲಿ ಗ್ರಾಪಂ ಅಧ್ಯಕ್ಷೆ ಎಸ್.ಮಂಗಳಗೌರಮ್ಮ ಇದ್ದರು.
ರಾಜ್ಯದಲ್ಲಿ ಸೈನ್ಸ್ ಸಿಟಿ ನಿರ್ಮಿಸಲು ಅನಮತಿ ನೀಡಲಾಗಿದೆ, ಕನಿಷ್ಟ 30 ಲಕ್ಷ ಜನಸಂಖ್ಯೆ ಹೊಂದಿರುವ ನಗರವೇ ಆಗಬೇಕು ಎಂಬ ಮಾರ್ಗಸೂಚಿ ಹಿನ್ನೆಲೆಯಲ್ಲಿ ತುಮಕೂರು ಬದಲಾಗಿ, ಬೆಂಗಳೂರಿನಲ್ಲಿ ಕೇಂದ್ರ ಆರಂಭಿಸಲಾಗಿದೆ. ಹಾಗಾಇ, ಉಪಕೇಂದ್ರಗಳನ್ನು ರಾಮನಗರ, ಕೋಲಾರ, ಚಿತ್ರದುರ್ಗ, ವಿಜಯನಗರ ಬಿಟ್ಟು ಉಳಿದೆಲ್ಲಾ ಜಿಲ್ಲೆಯಲ್ಲಿಯೂ ಸ್ಥಾಪಿಸಲಾಗಿದೆ. ಎಲ್ಲೆಡೆಯೂ ತಾರಾಲಯ ಅಭಿವೃದ್ಧಿಗೆ ಪ್ರಯತ್ನವಿದೆ. ಎನ್.ಎಸ್.ಬೋಸರಾಜು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ