ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆ

VV_Seminar
Published on

ತುಮಕೂರು: ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆಯಿದ್ದು ಆ ನಿಟ್ಟಿನಲ್ಲಿ ಸಂಶೋಧನಾ ಗುಣಮಟ್ಟವನ್ನು ಹೆಚ್ಚಿಸುವುದು ವಿಶ್ವವಿದ್ಯಾಲಯಗಳ ಆದ್ಯತೆಯಾಗಬೇಕು ಎಂದು ಶಿವಮೊಗ್ಗ ಕುವೆಂಪು ವಿವಿಯ ಅನ್ವಯಿಕ ಭೂವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಸೈಯದ್​ ಅಶ್ಫಾಕ್​ ಅಹಮದ್​ ಹೇಳಿದರು.

ತುಮಕೂರು ವಿವಿಯ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಗಳು ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ವ್ಯಕ್ತಿವಿವರಗಳನ್ನು ಬಳಸುವ ಮೂಲಕ ಸಂಶೋಧನ ಗೋಚರತೆಯನ್ನು ಹೆಚ್ಚಿಸುವಿಕೆ ಕುರಿತ 2 ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಉನ್ನತ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸುವುದು ಆಯಾ ಸಂಶೋಧನಾರ್ಥಿಯ ವಿವೇಚನೆಗೆ ಬಿಟ್ಟದ್ದು ಎಂದು ಯುಜಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಈ ಹಿಂದೆ ಕಡ್ಡಾಯವಾಗಿ ಎರಡು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಮಾರ್ಗಸೂಚಿಯಿತ್ತು. ಆದರೆ, ಹೊಸ ನಿಯಮಗಳು ಸಂಶೋಧನೆಯ ಮಟ್ಟವನ್ನು ಎಲ್ಲಿಗೆ ಕೊಂಡೊಯ್ಯುತ್ತಿವೆ ಎನ್ನವುದೇ ಯಕ್ಷ ಪ್ರಶ್ನೆಯಾಗಿದೆ ಎಂದರು.

ಧನ ಸಹಾಯ ಆಯೋಗಗಳು ಹಾಗೂ ಉದ್ಯೋಗ ಸಂಸ್ಥೆಗಳು ಬಯಸುವುದು ಗುಣಮಟ್ಟದ ಸಂಶೋಧನಾ ಪ್ರಬಂಧಗಳನ್ನು. ಉನ್ನತ ಸಂಶೋಧನಾ ನಿಯತಕಾಲಿಕಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದರಿಂದ ಮಾತ್ರ ಪಿಎಚ್​ಡಿಗೆ ಬೆಲೆ ಬರುವುದು. ಯುಜಿಸಿಯಿಂದ ಮಾನ್ಯತೆ ಪಡೆದ ನಿಯತಕಾಲಿಕಗಳಲ್ಲಷ್ಟೇ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕು. ಹಣ ಪಡೆಯುವ ನಕಲಿ ನಿಯತಕಾಲಿಕಗಳನ್ನು ನಂಬಬಾರದು ಎಂದು ಎಚ್ಚರಿಸಿದರು.

ಕುಲಸಚಿವೆ ನಾಹಿದಾ ಜಮ್​ ಜಮ್​, ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಗಳ ನಿರ್ದೇಶಕ ಪ್ರೊ. ಬಿ. ಟಿ. ಸಂಪತ್​ ಕುಮಾರ್​, ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಪ್ರೊ.ಬಿ.ರಮೇಶ್​ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಡಾ. ಎ.ರೂಪೇಶ್​ ಕುಮಾರ್​ ನಿರೂಪಿಸಿದರು.

ಸಂಶೋಧನೆಗಳೇ ವಿವಿಗಳ ಭವಿಷ್ಯ

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಹಾಗೂ ನ್ಯಾಕ್​ ಮಾನ್ಯತೆಯಲ್ಲಿ ಎ+ ಶ್ರೇಣಿ ಗಳಿಸಲು ಗುಣಮಟ್ಟದ ಸಂಶೋಧನೆಗಳನ್ನು ಕೈಗೊಳ್ಳಬೇಕು. ಜಾಗತಿಕ ಮಟ್ಟದ ಸಂಶೋಧನೆಗಳಾಗಬೇಕು. ಸಂಶೋಧನೆಗಳೇ ವಿಶ್ವವಿದ್ಯಾಲಯಗಳ ಭವಿಷ್ಯ. ಇದನ್ನು ಸಾಧಿಸಲು ಸ್ವಯಂಶಿಸ್ತು ಬಹಳ ಮುಖ್ಯ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net