

ತುಮಕೂರು: ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ಜಲಕ್ರೀಡಾ ಸಾಹಸಿಗ ಗುಬ್ಬಿ ತಾಲೂಕು ಸುಗ್ಗನಪಾಳ್ಯದ ಎಸ್.ಸಿ. ನಾಗಾನಂದಸ್ವಾಮಿ, ಸಮಾಜ ಸೇವಾ ವಿಭಾಗದಲ್ಲಿ ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ಗೆ ಗೌರವ ಡಾಕ್ಟರೇಟ್ ಅನ್ನು ಬುಧವಾರ ಪ್ರದಾನ ಮಾಡಲಾಯಿತು.
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ ನಾಹಿದ ಜಮ್ ಜಮ್, ಪ್ರೊ.ಕೆ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಘಟಿಕೋತ್ಸವದಲ್ಲಿ 36 ಅಭ್ಯರ್ಥಿಗಳಿಗೆ ಪಿಎಚ್.ಡಿ., 3 ಅಭ್ಯರ್ಥಿಗಳಿಗೆ ಡಿ.ಲಿಟ್ ಪದವಿ, 1758 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 10,230 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ಒಟ್ಟು 11988 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 74 ವಿದ್ಯಾರ್ಥಿಗಳು 98 ಚಿನ್ನದ ಪದಕ ಹಾಗೂ 8 ನಗದು ಬಹುಮಾನಗಳನ್ನು ಘಟಿಕೋತ್ಸವದಲ್ಲಿ ಹಂಚಿಕೊಂಡರು.
ವಾಲ್ಮೀಕಿ ಜಗದ್ಗುರು ಗೈರು ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರಿಗು ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ, ವಾಲ್ಮೀಕಿ ಜಗದ್ಗುರುಗಳು ಗೈರಾಗಿದ್ದದ್ದು ಎದ್ದುಕಾಣುತ್ತಿತ್ತು.
ಗೌರವ ಡಾಕ್ಟರೇಟ್ ಒಲ್ಲೆ ಎಂದಿದ್ದ ಕಿಚ್ಚ ಸುದೀಪ್! ಮೂವರ ಸಾಧಕರ ಜತೆ ಚಿತ್ರನಟ ಕಿಚ್ಚ ಸುದೀಪ್, ಶಿವಾನಂದ, ವೆಂಕಟೇಶ್ ಅವರ ಹೆಸರುಗಳನ್ನು ಶೋಧನಾ ಸಮಿತಿ ಶಿಾರಸು ಮಾಡಿತ್ತು. ಆದರೆ, ನಟ ಕಿಚ್ಚ ಸುದೀಪ್ ಗೌರವ ಡಾಕ್ಟರೇಟ್ ಪದವಿಯನ್ನು ನಯವಾಗಿಯೇ ತಿರಸ್ಕರಿಸಿದ್ದರು. ಅವರನ್ನು ಹೊರತುಪಡಿಸಿದಂತೆ ಅರ್ಜಿ ಸಲ್ಲಿಸಿದ್ದವರ ಹೆಸರನ್ನು ಆಯ್ಕೆಗೆ ಪರಿಗಣಿಸಲಾಗಿದ್ದು ಅಂತಿಮವಾಗಿ ರಾಜ್ಯಪಾಲರು ಮೂವರನ್ನು ಹೆಸರಿಗೆ ಮುದ್ರೆ ಒತ್ತಿದ್ದರು.