

ತುಮಕೂರು: ನಮ್ಮ ನೆಲದ ಕಲೆ, ಸಂಸ್ಕೃತಿ, ಆಚಾರವಿಚಾರಗಳನ್ನು ವಿದ್ಯಾರ್ಥಿಗಳೇ ಉಳಿಸಿ, ಬೆಳೆಸಬೇಕು. ಆದರೆ, ವಿದ್ಯಾರ್ಥಿಗಳು ತಮ್ಮ ಬದುಕಲ್ಲಿ ಸ್ವದೇಶಿ ಮನೋಭಾವವನ್ನು ರೂಢಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ನಟ, ನಿರ್ದೇಶಕ, ರಂಗಕರ್ಮಿ ಡಾ.ಟಿ.ಎಸ್.ನಾಗಾಭರಣ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜು ಬುಧವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಜಾನಪದ ಕಲಾಮೇಳ ಕಲಾಸಿರಿ-2023 ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತದೆ. ನಾವು ಮಾಡುವ ಉತ್ತಮ ಕಾರ್ಯ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ ಎಂದರು.
ಯಂತ್ರ ಮಾನವರಾಗದೆ ಮಂತ್ರ ಮಾನವರಾಗಬೇಕು. ಮನಸಿನ ಮಾತು ಕೇಳಬೇಕು. ಬದುಕನ್ನು, ಜಗತ್ತನ್ನು ತೆರೆದ ಕಣ್ಣುಗಳಿಂದ ನೋಡಬೇಕು. ತಂತ್ರಜ್ಞಾನದ ಬಳಕೆ ಇತಿಹಾಸದ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಬದಲು ನಮ್ಮ ನೈಜತೆಯನ್ನು ಕಸಿದುಕೊಳ್ಳುತ್ತಿದೆ. ಇದಕ್ಕೆ ರಂಗಭೂಮಿಯೂ ಹೊರತಾಗಿಲ್ಲ. ವಿದ್ಯೆ ಕಲೆಯ ವೈಭವವನ್ನು ಸಾರುವ ಬೆಳಕಾಗಬೇಕು. ಸ್ವಂತಿಕೆಯ ಮಾರ್ಗದಲ್ಲಿ ಸಾಗಿ, ಸಾಧಿಸುವ ಬಿಂದುವಾಗಬೇಕು ಎಂದು ಹೇಳಿದರು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಕಲಾ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಜನಪ್ರಿಯ ವಿಜ್ಞಾನ ಲೇಖಕ ಡಾ. ಎಚ್. ಎಸ್. ನಿರಂಜನಾರಾಧ್ಯ ಅವರಿಗೆ ವಿವಿ ಕಲಾ ಕಾಲೇಜಿನ ವಾರ್ಷಿಕ ಕಲಾಸಿರಿ-2023 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಪ್ರಸನ್ನ ಕುಮಾರ್, ಮಲೆ ಮಾದೇಶ್ವರ ಬೆಟ್ಟದ ಜಾನಪದ ಗಾಯಕ ಡಾ. ಎಂ. ಮಹಾದೇವಸ್ವಾಮಿ, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಮತ್ತು ಉಪವಲಯ ಅರಣ್ಯಾಧಿಕಾರಿ ಟಿ.ಬಿ.ಮಂಜುನಾಥ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕಿ ಡಾ. ಎಸ್.ಗಿರಿಜಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಆರ್.ಸುದೀಪ್ ಕುಮಾರ್, ಸಮಾಜ ಸೇವಕ ಬಿ. ಆರ್. ನಟರಾಜಶೆಟ್ಟಿ ಉಪಸ್ಥಿತರಿದ್ದರು.