ಆಧುನೀಕರಣದಿಂದ ನಮ್ಮ ಸಂಸ್ಕೃತಿಯ ಬೇರುಗಳು ಬುಡಮೇಲು: ಕೆ.ಎಸ್.ಸಿದ್ದಲಿಂಗಪ್ಪ

VV_Arts_CLG
Published on

ತುಮಕೂರು: ಆಧುನೀಕರಣ ನಮ್ಮ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಇತಿಹಾಸ ಮತ್ತು ಪರಂಪರೆಯನ್ನು ಬುಡಮೇಲು ಮಾಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಕಳವಳ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜು ಶುಕ್ರವಾರ ಆಯೋಜಿಸಿದ್ದ ಕಲಾ ಸಂಸ್ಕೃತಿ-2023 ಕಾರ್ಯಕ್ರಮವನ್ನು ರಾಗಿಯ ರಾಶಿಗೆ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪರಂಪರೆಯನ್ನು ಉಳಿಸಿಕೊಳ್ಳುವುದೇ ನಿಜವಾದ ಸಂಸ್ಕೃತಿ. ಆಗಷ್ಟೇ ನಮ್ಮ ನೆಲ ಜಲದ ಭವ್ಯತೆಯ ಮಹತ್ವ ಅರಿವಾಗುವುದು ಎಂದರು.

ನಮ್ಮದಾದ ಕಲೆ, ಕೃಷಿ, ಸಂಸ್ಕೃತಿ ಮರೆಯಾಗುತ್ತಿವೆ. ಎಲ್ಲೆಡೆ ಯಂತ್ರಗಳ ಬಳಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ನಿರತರಾಗಿದ್ದಾರೆ. ನಮ್ಮತನವನ್ನು ಉಳಿಸಿಕೊಳ್ಳಬೇಕಾದವರು ವಿದ್ಯಾರ್ಥಿಗಳು ಎಂದು ತಿಳಿಸಿದರು.

ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ನಮ್ಮ ಪೋಷಕರಿಂದ ನಮ್ಮ ನೆಲದ ಸಂಸ್ಕೃತಿಯನ್ನು ತಿಳಿಯಬೇಕು. ಅವರಿಂದ ಕಲಿಯುವ ವಿಷಯಗಳು ಸಾಕಷ್ಟಿವೆ. ಬದುಕು ಕಟ್ಟಿಕೊಳ್ಳುವ ವಿದ್ಯೆ ತಂದೆ ತಾಯಿಯರಿಂದಲೆ ಕಲಿಯುವ ಪಾಠ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಯಾವುದೇ ಜಾತಿ ಧರ್ಮ ಮತಕ್ಕೆ ಸೀಮಿತವಾಗದೆ ಎಲ್ಲರನ್ನೂ ಪ್ರೀತಿಸಬೇಕು. ನಾಳಿನ ಉಜ್ವಲ ಭವಿಷ್ಯಕ್ಕೆ ನೀವು ಪ್ರತಿ ಕ್ಷಣ ಶ್ರಮಿಸಬೇಕು. ದೇಶದ ಏಳ್ಗೆಗಾಗಿ ಬದುಕಬೇಕು. ಅಭಿವೃದ್ಧಿ ಕಾರ್ಯಗಳನ್ನು ಒಗ್ಗಟ್ಟಿನಿಂದ ಮಾಡಬೇಕು ಎಂದು ಸಿಪಿಐ ಡಾ.ಎಂ.ಬಿ.ನವೀನ್ ಕುಮಾರ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ನಮ್ಮ ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಪ್ರತಿ ಹೆಜ್ಜೆಯಲ್ಲೂ ಉಳಿಸಿಕೊಂಡು ಬರುತ್ತಿದ್ದಾರೆ. ಈ ಸಂಸ್ಕೃತಿಯನ್ನು ಹೀಗೆಯೇ ಮುಂದುವರೆಸಿ ಬೆಳಸಿಕೊಂಡು ಹೋಗಬೇಕು ಎಂದರು.

ಕಲಾ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಶಿವಣ್ಣ , ನಿರ್ದೇಶಕ ಹರಿಪ್ರಸಾದ್ ಜಯಣ್ಣ, ನಟ ಪೃಥ್ವಿ ಶ್ಯಾಮನೂರ್, ಸಾಂಸ್ಕೃತಿಕ ಸಮಿತಿಯ ಸಂಯೋಜಕ ಡಾ.ಸಿ.ಎಂ.ರವಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಆರ್.ಸುದೀಪ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net