ಕೃತಕ ಬುದ್ಧಿಮತ್ತೆಯು ನೈಜತೆ ಮೀರಲು ಸಾಧ್ಯವಿಲ್ಲ: ಪ್ರೊ.ವೆಂಕಟೇಶ್ವರಲು

VV_Artificial
Published on

ತುಮಕೂರು: ಆವಿಷ್ಕಾರ, ಸಂಶೋಧನೆ, ಸಾಧನೆ ಭಾರತದ ನಿರಂತರ ಪ್ರಕ್ರಿಯೆಯಾಗಿ ವಿಶ್ವಕ್ಕೆ ಗುರುಗಳಾಗಿದ್ದೇವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ವಿವಿಯ ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಆಯೋಜಿಸಿದ್ದ ಕೃತಕ ಬುದ್ಧಿಮತ್ತೆಯ ಇತ್ತೀಚಿನ ಪ್ರವೃತ್ತಿಗಳು ಕುರಿತ ರಾಜ್ಯ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂತ್ರಜ್ಞಾನದ ಬೆಳವಣಿಗೆಯಲ್ಲಿ ಭಾರತದ ಛಾಪು ಕೃತಕ ಬುದ್ಧಿಮತ್ತೆಯನ್ನೂ ಮೀರಿದೆ ಎಂದರು.

ತಂತ್ರಜ್ಞಾನ ಎಷ್ಟೇ ಬೆಳೆದರೂ ಕೃತಕ ಬುದ್ಧಿಮತ್ತೆಯು ನೈಜತೆಯನ್ನು ಮೀರಲು ಸಾಧ್ಯವಿಲ್ಲ. ಮಾನವನ ಶಕ್ತಿಯ ಮುಂದೆ ಮಾನವ ನಿರ್ಮಿತ ತಂತ್ರಜ್ಞಾನ ಬಳಕೆಗಷ್ಟೇ ಸೀಮಿತವಾಗಬೇಕು. ಬದುಕು ಭಾವನೆಗಳ ಒಳಗೆ ಬಂದಾಗ ನಮ್ಮನ್ನು ಆಕ್ರಮಿಸಿ, ದುರುಪಯೋಗದ ಸಮಯ ಶುರುವಾಗುತ್ತದೆ. ವಿದ್ಯಾರ್ಥಿಗಳು ಪ್ರಯೋಗಾಲಯಗಳ ಸಂಪೂರ್ಣ ಉಪಯೋಗ ಪಡೆಯಬೇಕು ಎಂದರು.

ಕೃತಕ ಬುದ್ಧಿಮತ್ತೆಯು ಬಹುತೇಕ ಎಲ್ಲ ಕ್ಷೇತ್ರಗಳನ್ನಾಕ್ರಮಿಸಿಕೊಂಡಿದೆ. ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಈಗಾಗಲೇ ತೋರಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ನೈಜತೆಗೆ ಸವಾಲೊಡ್ಡಬಹುದು ಎಂದು ಬೆಂಗಳೂರಿನ ಆರ್‌ವಿ ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ವಿಭಾಗದ ಸಹಪ್ರಾಧ್ಯಾಪಕಿ ಡಾ.ಎಂ.ಎಸ್. ವಿಜಯಲಕ್ಷ್ಮಿ ತಿಳಿಸಿದರು.

ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಕೃತಕ ಬುದ್ಧಿಮತ್ತೆಯ ಸಹಾಯದಿಂದ 60 ಮಿಲಿಯನ್ ಭಯೋತ್ಪಾದಕ ಸಂಘಟನೆಗಳನ್ನು ನಾಶಮಾಡಿದ್ದಾರೆ. ಕೃತಕ ಬುದ್ಧಿಮತ್ತೆಯು ಎಲ್ಲವನ್ನೂ ಬದಲಾಯಿಸಬಹುದಾದ ಕಾಲ ಸಮೀಪದಲ್ಲಿದೆ. ನಮ್ಮ ವಿಶ್ವಾಸಾರ್ಹತೆ, ಕಾರ್ಯಕ್ಷಮತೆಯಿಂದಷ್ಟೇ ನಾವು ವೃತ್ತಿಯಲ್ಲಿ ಮುಂದುವರಿಯಬಹುದು ಎಂದರು.

ಸಹಾಯಕ ಪ್ರಾಧ್ಯಾಪಕ ಡಾ. ಬಿ.ಎಲ್. ಮುಕುಂದಪ್ಪ ಉಪಸ್ಥಿತರಿದ್ದರು. ವಿವಿ ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕಿ ಡಾ.ಬಿ.ಎಂ.ಕುಸುಮಾ ಕುಮಾರಿ ಸ್ವಾಗತಿಸಿದರು. ವಿವಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಡಿ.ಪೂರ್ಣಿಮಾ ನಿರೂಪಿಸಿದರು. .

ಮುಂದಿನ ದಿನಗಳಲ್ಲಿ ತುಮಕೂರು ವಿವಿ ಸಂಪೂರ್ಣ ಡಿಜಿಟಲ್ ಆಗಲಿದೆ. ಹೊಸ ತಂತ್ರಜ್ಞಾನಗಳ ಪರಿಚಯ ನಮ್ಮ ಮಕ್ಕಳಿಗೆ ಸಿಗಲಿದೆ. ಬದಲಾವಣೆಯ ಮಂತ್ರ ಶಿಕ್ಷಣ ಕ್ಷೇತ್ರದಲ್ಲಿ ಮೊದಲು ತಂದರೆ ಜಗತ್ತನ್ನು ಬದಲಾಯಿಸುವ ಆವಿಷ್ಕಾರಗಳನ್ನು ಕಾಣಬಹುದು. ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ, ತುಮಕೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net