ಶಾಲೆ ಮುಗಿಸಿ ಮನೆಗೆ ಹೊರಟಿದ್ದವನ ಜೀವ ತೆಗೆದ ಆಟೋ

Auto_Student
Published on

ಮಧುಗಿರಿ: ಪಟ್ಟಣದ ವಿವೇಕಾನಂದ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಕಿಶೋರ್(9) ಶಾಲೆ ಮುಗಿಸಿ ಮನೆಗೆ ವಾಪಸಾಗುವಾಗ ಆಟೋದಿಂದ ಬಿದ್ದು ಸಾವನ್ನಪ್ಪಿದ್ದಾನೆ.

ಪಟ್ಟಣದ ಬೆಂಕಿಪುರದ ಕಿಶೋರ್ ವಿವೇಕಾನಂದ ಶಾಲೆಗೆ ಆಟೋ ಹಿಡಿದು ಮನೆಗೆ ತೆರಳಲು ಲಿಂಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಂಭಾಗ ಇಳಿಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಟೋ ಚಲಿಸಿದ್ದು ಅಪಘಾತಕ್ಕೆ ಕಾರಣವಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ವೇಳೆಗೆ ವಿದ್ಯಾರ್ಥಿಯ ಪ್ರಾಣ ಹೋಗಿತ್ತು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಮೃತ ಕಿಶೋರ್ ತಾಯಿ ಸರೋಜಮ್ಮ ಮರುವೇಕೆರೆ ಆಶಾ ಕಾರ್ಯಕರ್ತೆ, ತಂದೆ ಅಶ್ವತ್ಥಪ್ಪ ಗಾರೆ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರು. ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net