ತುಮಕೂರು: ನಿವೃತ್ತ ಮುಖ್ಯಶಿಕ್ಷಕ ಬಿ.ಸಿ.ಹನುಮಂತಯ್ಯ ಹೃದಯಾಘಾತದಿಂದ ನಿಧನ: ಕುಟುಂಬದಲ್ಲಿ ಮಡುಗಟ್ಟಿದ ಶೋಕ! Heart Attack

Heart Attack
Published on

Heart Attack : ಇತ್ತೀಚೆಗೆ ರಾಜ್ಯದಲ್ಲಿ ಸಾಕಷ್ಟು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 20ಕ್ಕೂ ಅಧಿಕ ಮಂದಿ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ. ಅಘಾತಕಾರಿ ಸಂಗತಿ ಏನೆಂದರೆ, ಹೃದಯಾಘಾತದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಪ್ರತಿನಿತ್ಯ ವರದಿಯಾಗುತ್ತಲೇ. ರಾಜ್ಯದಲ್ಲೂ ಸಾವಿನ ಸರಣಿ ಮುಂದುವರಿದಿದೆ. ಇದೀಗ ತುಮಕೂರಿನಲ್ಲಿ ಒಂದು ಪ್ರಕರಣ ವರದಿಯಾಗಿದೆ.

ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಪದವೀಧರೇತರ ಮುಖ್ಯಶಿಕ್ಷಕ ಬಿ.ಸಿ.ಹನುಮಂತಯ್ಯ(83) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೆಬ್ಬೂರು ಹೋಬಳಿ ಬನದಪಾಳ್ಯ ಗ್ರಾಮದ ಹನುಮಂತಯ್ಯ ಅವರಿಗೆ ಅ.2ರಂದು ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆ ಬಳಿಕ ತುಮಕೂರಿನ ಸಿದ್ಧಗಂಗಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಹಿರಿಜೀವ ಇನ್ನಷ್ಟು ದಿನ ನಮ್ಮೊಂದಿಗೆ ಇರಲಿ ಎಂದು ಆಸ್ಪತ್ರೆಯ ಬಾಗಿಲಲ್ಲಿ ನಿಂತ ಕುಟುಂಬಸ್ಥರು ಮನದಲ್ಲೇ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಎರಡು ಸ್ಟಂಟ್ಸ್ ಅಳವಡಿಸಿದರು. ಬಳಿಕ ರೋಗಿಯು ಚೇತರಿಸಿಕೊಳ್ಳುತ್ತಾ ಆಸ್ಪತ್ರೆಯ ವಾರ್ಡ್ ನಲ್ಲಿ ಕುಟುಂಬಸ್ಥರೊಂದಿಗೆ ಮಾತಾಡಿದ್ದರು. ಅ.4ರ ಸಂಜೆ 4.15ಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಖುಷಿಯಿಂದ ಅಪ್ಪನನ್ನ ಮನೆಗೆ‌ ಕರೆದೊಯ್ಯುತ್ತಿದ್ದ ಮಗ ಗಿರೀಶ್ ಮತ್ತು ತಮ್ಮನ ಮಗ ದಿನೇಶ್ ಗೆ ಮಾರ್ಗದಲ್ಲೇ ಆಘಾತ ಕಾದಿತ್ತು.

ಇನ್ನೇನು‌ ಮನೆ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ಹನುಮಂತಯ್ಯಗೆ ಹೃದಯಸ್ತಂಭನ ಆಗಿದೆ. ಅತ್ತ ಆಸ್ಪತ್ರೆಯಿಂದ ಅಪ್ಪನನ್ನು ಅಣ್ಣನೊಂದಿಗೆ ಕಾರಿನಲ್ಲಿ ಕೂರಿಸಿ ಜೋಪಾನ ಅಪ್ಪಾ ಎಂದು ಕೈಹಿಡಿದು ಧೈರ್ಯ ಹೇಳಿ ತುಮಕೂರಿನಲ್ಲಿ ತಾನು ವಾಸವಿದ್ದ ಮನೆಗೆ ಆಗಷ್ಟೇ ಬಂದ ಕಿರಿಯ ಪುತ್ರಿ ಲತಾಗೂ ಅಪ್ಪನ ಸಾವಿನ ಸುದ್ದಿ ಕಂಗೆಡಿಸಿದೆ.

ಹನುಮಂತಯ್ಯ ಜೀವಂತವಾಗಿ ಬರುತ್ತಿದ್ದಾರೆ ಎಂದು ಮನೆ ಬಾಗಿಲಲ್ಲೇ ಖುಷಿಯಿಂದ ಕಾಯುತ್ತಿದ್ದ ಪತ್ನಿ ಜಯಮ್ಮ, ಹಿರಿಯ ಪುತ್ರಿ‌ ರಾಧ, ಮೊಮ್ಮಕ್ಕಳು, ಸೊಸೆ, ಅಳಿಯ ಹಾಗೂ ಕೂಡು ಕುಟುಂಬಸ್ಥರಿಗೆ ಅವರ ಮೃತದೇಹ ಕಂಡು ಆಘಾತವಾಗಿದೆ. ದೇವರು ಕೊಟ್ಟು ಕಿತ್ತುಕೊಂಡ ಎಂದು‌... ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸ್ವಗ್ರಾಮದಲ್ಲಿ ಅ.5 (ಭಾನುವಾರ) ಅಂತ್ಯಕ್ರಿಯೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net