

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಮಾದಪಟ್ಟಣದ ಮಂಜುನಾಥ್(34) ಆನ್ ಲೈನ್ ಜೂಜಿಗೆ ಬಿದ್ದು ಸಾಲ ತೀರಿಸಲಾಗದೆ ಮನನೊಂದು ಶನಿವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾದಪಟ್ಟಣದ ನಿವಾಸಿ ಮಂಗಳಗೌರಮ್ಮ ಮಗನಾದ ಮಂಜುನಾಥ್ ಮದುವೆಯಾಗಿ ಒಂದು ವರ್ಷವಷ್ಟೇ ಕಳೆದಿತ್ತು. ಮೃತನು ಸೀಮೆ ಹಸುಗಳನ್ನು ಸಾಕಿಕೊಂಡು ಅದರಿಂದ ಬರುವ ಹಣದಿಂದಲೇ ಜೀವನ ನಡೆಸುತ್ತಿದ್ದನು.
ಈಚೆಗೆ ಮೊಬೈಲ್ನಲ್ಲಿ ರಮ್ಮಿ ಆಟದ ಜೂಜಿಗೆ ಬಿದ್ದು ಆಟವಾಡಲು ಅಲ್ಲಿ ಇಲ್ಲಿ ವಿಪರೀತ ಕೈಸಾಲ ಮಾಡಿಕೊಂಡಿದ್ದಾನೆ. ಅದನ್ನು ತೀರಿಸಲಾಗದೆ ಜಿಗುಪ್ಸೆಗೊಂಡು ಶನಿವಾರ ಬೆಳಗ್ಗೆ ತಮ್ಮ ಮನೆಯ ಮೇಕೆ ಕಟ್ಟುವ ಜಂತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.