ತುಮಕೂರು-ನೆಲಮಂಗಲ ಚತುಷ್ಪಥಕ್ಕೆ ಹೊಸ ರೂಪ

somanna_news
Published on

ತುಮಕೂರು: ನೆಲಮಂಗಲ&ತುಮಕೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಹೊಸ ರೂಪ ಕೊಡುವ ಚಿಂತನೆಯಿದ್ದು ಈ ಯೋಜನೆಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸುಳಿವು ನೀಡಿದರು.

ನಗರದ ಗೃಹಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗಿನ ಔಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ನೆಲಮಂಗಲದ ಮಾದಾವರದಿಂದ ತುಮಕೂರಿನ ಶಿರಾ ಗೇಟ್​ವರೆಗೆ 46 ಕಿ.ಮೀ., ಇದೆ. ಈ ದೂರವನ್ನು ಕ್ರಮಿಸಲು ಒಂದೂವರೆ ಗಂಟೆ ಬೇಕಾಗಲಿದೆ. ಹಾಗಾಗಿ, ಈ ಚತುಷ್ಪಥ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲು ಬಜೆಟ್​ನಲ್ಲಿ ಘೋಷಣೆ ಮಾಡಲಾಗುವುದು ಎಂದರು.

ಜಲಜೀವನ್​ ಮಿಷನ್​ ಯೋಜನೆಯಡಿ ಮನೆ ಮನೆಗೆ ಶುದ್ಧ ನೀರು ಒದಗಿಸುವ ಕಾರ್ಯಕ್ರಮ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಸೇರಿದಂತೆ ಜಲಶಕ್ತಿ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಮಂಗಳವಾರ ಹಾಗೂ ಬುಧವಾರ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಜಿಲ್ಲೆಯಲ್ಲಿ ಆಗಿರುವ ಕಾಮಗಾರಿಗಳು ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಒಂದೇ ನಾಣ್ಯದ ಎರಡು ಮುಖಗಳು!: ರೈಲ್ವೆ ಹಾಗೂ ಜಲಶಕ್ತಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಬೇಕಾಗಿದ್ದು, ಈ ಸಂಬಂಧ ಈಗಾಗಲೇ ಸಿಎಂ ಜತೆ ಚರ್ಚಿಸಿದ್ದೇನೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸೋಮಣ್ಣ ಹೇಳಿದರು.

3 ದಿನ ಕ್ಷೇತ್ರದಲ್ಲಿರಲು ಮೋದಿ ಸೂಚನೆ ದೆಹಲಿಯ ಕಚೇರಿಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಇಲಾಖೆಯ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ. ಉಳಿದಂತೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಕ್ಷೇತ್ರದ ಕೆಲಸ ಕಾರ್ಯಗಳನ್ನು ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿರುವುದಾಗಿ ಸಚಿವ ಸೋಮಣ್ಣ ಹೇಳಿದರು.

ಇದು ನನಗೆ ಕ್ಷೇತ್ರದ ಜನತೆ ಕೊಟ್ಟಿರುವ ಬಳುವಳಿ. ನಾನು ಸಂಸದನಂತೆ ಕೆಲಸ ಮಾಡುವುದಿಲ್ಲ. ಒಬ್ಬ ಕಾರ್ಪೋರೇಟರ್​ನಂತೆ ಬೀದಿ ಬೀದಿ ಸುತ್ತಿ ಕೆಲಸ ಮಾಡುವ ಇಚ್ಛೆ ಹೊಂದಿದ್ದೇನೆ. ಹಾಗೆಯೇ ಕೆಲಸ ಮಾಡುತ್ತೇನೆ. ಈಗ ಚುನಾವಣೆ ಮುಗಿದಿದ್ದು ಇನ್ಮುಂದೆ ಅಭಿವೃದ್ಧಿ ಕಾರ್ಯಗಳು ಸದ್ದು ಮಾಡಬೇಕಿದೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ. ವಿ.ಸೋಮಣ್ಣ ಕೇಂದ್ರ ಸಚಿವ

ಕೈತಪ್ಪಿದ ಏರ್​ಪೋರ್ಟ್​? ದಕ್ಷಿಣ ಏಷ್ಯಾದಲ್ಲೇ ನಂ.1 ಆಗಿ ವಸಂತನರಾಸಪುರ, ಡಾಬಸ್​ಪೇಟೆ ಕೈಗಾರಿಕಾ ಪ್ರದೇಶ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ಇತ್ತು. ಆದರೆ, ಈ ನಡುವೆ ತಮಿಳುನಾಡಿನವರು ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಮಾರ್ಣಕ್ಕೆ ಚಾಲನೆ ನೀಡಿದ್ದಾರೆ. ಇದರ ಹೊರತಾಗಿಯೂ ನಮ್ಮ ಜಿಲ್ಲೆಯಲ್ಲಿ ವಿಮಾನನಿಲ್ದಾಣ ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ಸಚಿವ ಸೋಮಣ್ಣ ಭರವಸೆಯಿತ್ತರು. ಸಿಟಿ ರೌಂಡ್ಸ್​ ಸಂಸದರಾಗಿ, ಸಚಿವರಾದ ಬಳಿಕ ವಿ.ಸೋಮಣ್ಣ ಶನಿವಾರ ಬೆಳ್ಳಂಬೆಳಗ್ಗೆ ತುಮಕೂರು ವಿವಿಯಲ್ಲಿ ವಾಯುವಿಹಾರಿಗಳು ಹಾಗೂ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪ್ರತಿನಿತ್ಯ ಅಭ್ಯಾಸ ಮಾಡುವ ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ನೇರವಾಗಿ ಜನರ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಿ.ಎಚ್​.ರಸ್ತೆ ಬಳಿಯ ಬಾಯರ್ಸ್​ ಹೋಟೆಲ್​ಗು ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net