

ತುಮಕೂರು: ಆನ್‌ಲೈನ್ ನಲ್ಲಿ ಮದ್ಯ ಮಾರಾಟ ವ್ಯವಹಾರ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ನಾನು ಅಬಕಾರಿ ಸಚಿವನಾದ ಮೇಲೆ ಇಲ್ಲಿ ಏನೇ ವ್ಯಾಪಾರ ಆದರೂ ಸ್ಥಳೀಯರಿಗೆ ಅನುಕೂಲ ಆಗಬೇಕು ಎಂಬುದು ನನ್ನ ಉದ್ದೇಶ. ಆನ್‌ಲೈನ್‌ನಿಂದ ಯಾರೋ ಅಂತರಾಷ್ಟ್ರೀಯ ಮಾರುಕಟ್ಟೆಯವನು ಬಂದು ಸ್ಥಳೀಯ ವ್ಯಾಪಾರಕ್ಕೆ ಹೊಡೆತುಕೊಡುವುದು ಬೇಡ. ಮದ್ಯ ವ್ಯಾಪಾರ ನಂಬಿಕೊಂಡು 3 ಲಕ್ಷ ಕುಟುಂಬಗಳು ಜೀವನ ಮಾಡ್ತೀವೆ ಎಂದು ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಶಾಂತಿಪ್ರಿಯ ರಾಜ್ಯ: ಕರ್ನಾಟಕ ಒಂದು ಶಾಂತಿ ಪ್ರಿಯ ರಾಜ್ಯ ಹಾಗಾಗಿ, ಪ್ರತಿಭಟನೆಗೆ ಅವಕಾಶ ಕೊಟ್ಟರೆ ಅನಾಹುತಗಳು ಆಗಬಾರದು ಎಂಬ ಕಾರಣಕ್ಕೆ ಜಗ್ಗೇಶ್ ಆ ರೀತಿ ಹೇಳಿಕೆ ಕೊಟ್ಟಿರಬೇಕು ಎಂದು ಸಚಿವ ಕೆ.ಗೋಪಾಲಯ್ಯ ಸಮರ್ಥಿಸಿಕೊಂಡರು.
ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪ್ರಬುದ್ಧ ವಾತಾವರಣ ಇದೆ. ನಾವೆಲ್ಲ ಶಾಂತಿ ಪ್ರಿಯರು. ಕರ್ನಾಟಕ ಜನ ರೊಚ್ಚಿಗೆದ್ದರೆ ಬೇರೆ ವಿಚಾರಗಳಲ್ಲಿ ಯಾವಮಟ್ಟಕ್ಕೆ ಹೋಗುತ್ತಾರೆ ಎಂಬುದನ್ನು ನಾವೆಲ್ಲಾ ನೋಡಿದ್ದೀವಿ. ಕಾವೇರಿ ನೀರಿನ ವಿಚಾರ, ರಾಜ್ಯದ ಗಡಿ ವಿಚಾರದಲ್ಲಿ ಕನ್ನಡಿಗರು ಹೇಗೆ ನಡೆದುಕೊಂಡಿದ್ದಾರೆಂಬುದು ಗೊತ್ತಿದೆ. ಹಾಗೆ ರಾಜ್ಯದ ವಿಚಾರ ಬಂದಾಗ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಅಷ್ಟೇ ಎಂದರು.