ನಾಮಪತ್ರ ಸಲ್ಲಿಕೆ ವೇಳೆ ಕೊಂಡವಾಡಿ ಶಕ್ತಿ ಪ್ರದರ್ಶನ

Kondavadi_Nomination
Published on

ತುಮಕೂರು: ತುಮಕೂರು ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಚುನಾವಣೆಗೆ ಮಧುಗಿರಿ ತಾಲೂಕು ನಿರ್ದೇಶಕ ಸ್ಥಾನಕ್ಕೆ ಎನ್​ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಜೆಡಿಎಸ್​ನ ಕೊಂಡವಾಡಿ ಚಂದ್ರಶೇಖರ್​ ಮಂಗಳವಾರ ನಾಮಪತ್ರ ಸಲ್ಲಿಸಿದರು.

ತುಮುಲ್​ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್​ ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ ನಡೆಸುವ ಮೂಲಕ ಸಹಕಾರ ಸಚಿವ ಕೆ.ಎನ್​.ರಾಜಣ್ಣಗೆ ಈ ಬಾರಿಯ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂಬ ಸಂದೇಶ ರವಾನಿಸಿದರು. ತುಮುಲ್​ ನಿರ್ದೇಶಕ ಸ್ಥಾನದ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದು ತಮ್ಮ ಬೆಂಬಲಿಗ ನಾಗೇಶ್​ಬಾಬು ಗೆಲ್ಲಿಸಿಕೊಳ್ಳಲು ಸಚಿವ ರಾಜಣ್ಣ ಎಲ್ಲ ರೀತಿಯ ಕಸರತ್ತು ನಡೆಸಿರುವುದು ರಹಸ್ಯವಾಗೇನು ಉಳಿದಿಲ್ಲ.

ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ನೇತೃತ್ವದಲ್ಲಿ ನೂರಾರು ಬೆಂಬಲಿಗರೊಂದಿಗೆ ಕೊಂಡವಾಡಿ ಚಂದ್ರಶೇಖರ್​ ರಿಟರ್ನಿಂಗ್​ ಅಧಿಕಾರಿ ಗೌರವಶೆಟ್ಟಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ಬಳಿಕ ಕೊಂಡವಾಡಿ ಹೈಕೋರ್ಟ್​ನತ್ತ ಧಾವಿಸಿದರು. ಈ ಬಾರಿ ಕೊಂಡವಾಡಿ ಸ್ಪರ್ಧೆಗೆ ಸಾಕಷ್ಟು ಕಾನುನು ಅಡೆತಡೆಗಳನ್ನು ತರಲಾಗಿದ್ದು ಚುನಾವಣಾ ಅಖಾಡದಲ್ಲಿ ಉಳಿದುಕೊಳ್ಳಲು ಕೊನೆಕ್ಷಣದವರೆಗೆ ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಿದ್ದಾರೆ.

ನಾಮಪತ್ರ ಸಲ್ಲಿಸಲು ನ.2 ಕೊನೆಯ ದಿನವಾಗಿದೆ. 3 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ನ.10ರಂದು ಅವಶ್ಯಬಿದ್ದಲ್ಲಿ ಮತದಾನ ನಡೆಯಲಿದ್ದು ಅಂದು ಸಂಜೆಯೇ ಮತ ಏಣಿಕೆ ಪ್ರಕ್ರಿಯೆ ಕೂಡ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net