

ತುಮಕೂರು: ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ನೀರಕಲ್ಲು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಲು ಆಗಮಿಸಿದ್ದ ಶಾಸಕರಿಗೆ
ಗ್ರಾಮಸ್ಥರು ನಮ್ಮ ಊರಿಗೆ ಯಾವ ದೇವಸ್ಥಾನಕ್ಕೂ ಹಣ ಕೊಡುವುದು ಬೇಡ, ಶಾಲೆಯನ್ನು ಅಭಿವೃದ್ಧಿ ಮಾಡಿಸಿಕೊಡಿ, ಶಾಲೆಗೆ ಮಳೆಯ ನೀರು ನುಗ್ಗಿದ್ದು, ಮಕ್ಕಳು ಕೊಳಚೆ ಪ್ರದೇಶದಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಪಾಠ ಕೇಳುವಂತಾಗಿದೆ ಎಂದು ತಲಾಟೆಗೆ ತೆಗೆದುಕೊಂಡರು.
ಗ್ರಾಮದಲ್ಲಿ ಸಮರ್ಪಕವಾದ ಚರಂಡಿ ಸೌಕರ್ಯಗಳಿಲ್ಲ. ನೀವು ಗೆದ್ದು 5 ವರ್ಷವಾಗಿದ್ದು, ಗೆದ್ದ ಬಳಿಕ ಈ ಕಡೆ ಮುಖವನ್ನೇ ಹಾಕಿಲ್ಲ, ನಮ್ಮೂರಿಗೆ ಯಾವ ಅಭಿವೃದ್ಧಿ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ ಶಾಸಕರು ಮುಜುಗರಕ್ಕೀಡಾದರು.
ಸಿಡಿಮಿಡಿಗೊಂಡ ಶಾಸಕರು ಏನಪ್ಪ ಮಾತನಾಡಬೇಕು, ಗ್ರಾಮಕ್ಕೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಈಗ ಆಗಿರುವ ಕೆಲಸವನ್ನು ಆಗಿಲ್ಲ ಎಂದು ಹೇಳುತ್ತಿದ್ದೀರಾ. ನಿಮ್ಮ ಗ್ರಾಮಕ್ಕೆ ಹಾಕಿರುವ ಅನುಧಾನವನ್ನು ಎಲ್ಲೂ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಲೇ ಅಲ್ಲಿಂದ ಕಾಲ್ಕಿತ್ತರು.