

ಮಧುಗಿರಿ: ತಾಲೂಕಿನ ಮಿಡಿಗೇಶಿಯಲ್ಲಿ ಗುರುವಾರ ರಾತ್ರಿ ನಡೆದಿರುವ ಜೋಡಿ ಕೊಲೆಗೆ ಜೆಡಿಎಸ್ ಶಾಸಕ ಎಂ.ವಿ.ವೀರಭದ್ರಯ್ಯನ ಸಹೋದರ ಕೆಎಎಸ್ ಅಧಿಕಾರಿ ಪಾತರಾಜು ಕುಮ್ಮಕ್ಕು ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪಿಸಿದರು.
ಮಧುಗಿರಿಯಲ್ಲಿ ಪ್ರತಿಭಟನಾನಿರತರನ್ನು ಭೇಟಿಯಾಗಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾಲೂಕಿನ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ, ಇದೊಂದು ನಾಗರೀಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆಯಾಗಿದೆ ಎಂದರು.
ಈ ಕೃತ್ಯದಲ್ಲಿ ಸ್ಥಳೀಯ ಶಾಸಕರ ಕೈವಾಡ ಇದ್ದಂತೆ ಕಂಡು ಬರುತ್ತಿಲ್ಲ ಆದರೆ, ಅವರ ತಮ್ಮ ಬೆಂಗಳೂರಿನಲ್ಲಿ ಅಧಿಕಾರಿಯಾಗಿರುವ ನಿಷ್ಪಾತಕ ಪಾತರಾಜು ಎಂಬಾತನ ಕೈವಾಡವಿದ್ದು, ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಾನೆ ಎಂದು ಆರೋಪಿಸಿದರು.
ಪೋಲೀಸರು ತನಿಖೆಯ ಸಂದರ್ಭದಲ್ಲಿ ಕೊಲೆ ಆರೋಪಿಗಳ ಮತ್ತು ಅಧಿಕಾರಿ ಪಾತರಾಜು ಎಂಬಾತನ 10 ದಿನಗಳ ಹಿಂದಿನ ಮೊಬೈಲ್ ಕರೆಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ ಅವರು ನೊಂದ ಕುಟುಂಬಕ್ಕೆ ಶೀಘ್ರವಾಗಿ ನ್ಯಾಯ ಒದಗಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.