

ಮಧುಗಿರಿ: ತಾತನ ಅಂತ್ಯಸಂಸ್ಕಾರಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದೆ 12 ದಿನದ ಬಾಣಂತಿ ಬರೊಬ್ಬರೊ ಒಂದು ಕಿಮೀ ಕಾಲ್ನಡಿಗೆಯಲ್ಲಿ ತಲುಪಿರುವ ಘಟನೆ ಭಾನುವಾರ ನಡೆದಿದೆ.
ತುಮಕೂರು ಜಿಲ್ಲೆಯ
ಮಧುಗಿರಿ ತಾಲೂಕು ಗೌರೆಡ್ಡಿಪಾಳ್ಯದ ಸರ್ವೋದಯ ಶಾಲೆ ಶಿಕ್ಷಕ ಸದಾ ಶಿವರೆಡ್ಡಿ ತಂದೆ ಶನಿವಾರ ಸಂಜೆ ವಯೋ ಸಹಜ ಖಾಯಿಲೆಯಿಂದ ಮೃತರಾಗಿದ್ದರಿಂದ ಭಾನುವಾರ ಅಂತ್ಯ ಸಂಸ್ಕಾರ ಇಟ್ಟುಕೊಳ್ಳಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಬರಬೇಕಿದ್ದ ಸಂಬಂಧಿಕರು ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದರಿಂದ ಬರಲಿಲ್ಲ. ಆದರೆ, ತಾತನ ಅಂತ್ಯ ಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿ ಜಮೀನಿನ ಬದುಗಳಲ್ಲಿ 1 ಕಿಮೀ ದೂರ ನಡೆದು ಬಂದಿದ್ದಾರೆ.
ಕೊಡಿಗೇನಹಳ್ಳಿಯ ಜಯಮಂಗಲಿ ನದಿ ಅಂಚಿನಲ್ಲಿರುವ ಸುಮಾರು 50 ಕ್ಕು ಹೆಚ್ಚು ಕುಟುಂಬಗಳು ವಾಸವಿದ್ದು ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ಸೂಕ್ತ ರಸ್ತೆ ಇಲ್ಲದೆ ಅಂತ್ಯ ಸಂಸ್ಕಾರಕ್ಕೆ ತೆರಳಲು ಸಾಧ್ಯವಾಗದೆ ಇಂದಿಗೂ ಪರದಾಡುತ್ತಿದ್ದಾರೆ.
ಸೂಕ್ತ ರಸ್ತೆ ಇಲ್ಲದ ಕಾರಣ ಜಯಮಂಗಲಿ ನದಿಯಲ್ಲಿ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಬಂದು ನದಿ ದಾಟಿ ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ಇಂದಿಗೂ ಇದೆ.
ಕೊಡಿಗೇನಹಳ್ಳಿಯಿಂದ ಸುಮಾರು 2 ಕಿಮಿ ದೂರದಲ್ಲಿರುವ ಗೌರೆಡ್ಡಿ ಪಾಳ್ಯದಲ್ಲಿ ಸ್ವಾತಂತ್ರ‍್ಯ ಪೂರ್ವದಿಂದಲೂ 60 ಕುಟುಂಬಗಳು ತಮ್ಮ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ.
ಬೆಳಗಾದರೆ ನಿತ್ಯ ಶಾಲಾ ಕಾಲೇಜು ಹಾಗೂ ಡೇರಿಗೆ ಹಾಲು ಹಾಕಲು ದಿನಸಿ ತರಲು ಜಯಮಂಗಲಿ ನದಿ ದಡ ಅಥವ ನದಿ ಪಕ್ಕದ ಜಮೀನಿನ ವನ್ನು ಆಶ್ರಯಿಸಿದ್ದಾರೆ. ಮಳೆ ಬಂದು ನದಿ ಬಂದಾಗ ವೃದ್ದರು, ವಿದ್ಯಾರ್ಥಿಗಳು, ಮಹಿಳೆಯರು, ಗರ್ಭಿಣಿಯರು ಹಾಗೂ ರೋಗಿಗಳ ಪಾಡುಹೇಳ ತೀರದಾಗಿದೆ.