

ಮಧುಗಿರಿ: ಪತ್ನಿ ಮೇಲೆ ಅನುಮಾನಗೊಂಡು ಆಕೆಯ ಕೊಲೆಗೆ ಯತ್ನಿಸಿದ್ದ ಸಂದರ್ಭದಲ್ಲಿ ರಕ್ಷಣೆಗೆ ಬಂದಿದ್ದ ನಾದಿನಿಯ ಎಡಗೈ ಕತ್ತರಿಸಿದ್ದ ಆರೋಪಿಗೆ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಸಾದಾ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನೆರೆಯ ಆಂದ್ರ ಪ್ರದೇಶದ ಮಡಕಶಿರಾದ ಹನುಮಂತ(45) ಶಿಕ್ಷೆಗೊಳಗಾದ ಅಪರಾಧಿ. 2020ರ ಮಾರ್ಚ್ ನಲ್ಲಿ ಮಧುಗಿರಿ ತಾಲೂಕು ಡಿ.ವಿ.ಹಳ್ಳಿಯಲ್ಲಿ ತನ್ನ ಮಾವ ತಿಪ್ಪಸ್ವಾಮಿ ಮನೆಯಲ್ಲಿ ಹೆಂಡತಿ ಅನಿತಾಳ ಕೊಲೆಗೆ ಯತ್ನಿಸಿದ್ದ ದೂರು ದಾಖಲಾಗಿತ್ತು.
ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಅನಿತಾ ಅವರ ತಂಗಿ ಮೇಘನಾ(16), ಕೈ ಅಡ್ಡ ಇಟ್ಟಾಗ ಆರೋಪಿ ಬೀಸಿದ ಮಚ್ಚಿನ ಏಟು ಮೇಘನಾಳ ಎಡಗೈನ ಮುಂಗೈಗೆ ಬಿದ್ದು ಮೇಘನಾಳ ಎಡಗೈ ಕತ್ತರಿಸಿ ಹೋಗಿತ್ತು.
ಪಿಎಸ್‌ಐ ಎಲ್.ಕಾಂತರಾಜು ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.