

ತುಮಕೂರು: ಚಿಕ್ಕನಾಯಕನಹಳ್ಳಿ ಕ್ಷೇತ್ರ ಟಿಕೆಟ್ ಬಯಸಿ ಕಾಂಗ್ರೆಸ್ ಕದ ತಟ್ಟಿರುವ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ನಿರೀಕ್ಷೆಯಂತೆಯೇ ರಾಜ್ಯ ಜೈವಿಕ ಇಂಧನ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ನೀಡಿರುವ ಕಿರಣ್‌ಕುಮಾರ್ ತುಮಕೂರು ಜಿಲ್ಲೆಯಲ್ಲಿ ರಾಜಕೀಯ ಕಾರಣಗಳಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ರಾಜ್ಯ ಜೈವಿಕ ಇಂಧನ ಮಂಡಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗೂ ರಾಜೀನಾಮೆ ಪತ್ರವನ್ನು ರವಾನಿಸಿದ್ದು ಬಿಜೆಪಿ ತೊರೆಯುವುದನ್ನು ಕಾಂಗ್ರೆಸ್ ನಾಯಕರಿಗೆ ಖಚಿತಪಡಿಸಿದ್ದಾರೆ.
ಸೋಮವಾರ ಕಾಂಗ್ರೆಸ್ ಸೇರ್ಪಡೆ:
ಸಚಿವ ಮಾಧುಸ್ವಾಮಿ ವಿರುದ್ಧ ಬಂಡಾಯವೆದ್ದಿರುವ ಕೆ.ಎಸ್.ಕಿರಣ್‌ಕುಮಾರ್ ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ಸೋಮವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ ಸುರ್ಜೇವಾಲ ಕೂಡ ತುಮಕೂರಿಗೆ ಆಗಮಿಸುತ್ತಿದ್ದು ಅಂದೇ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ.
ರಾಜೀನಾಮೆ ಮೂಲಕ ಬಿಜೆಪಿ ತೊರೆಯುವುದನ್ನು ಖಚಿತಪಡಿಸಿರುವ ಕೆಎಸ್‌ಕೆ ಟಿಕೆಟ್ ಹಂಚಿಕೆಯ ಅಂತಿಮ ಕಸರತ್ತು ಆರಂಭಿಸಿರುವ ಕಾಂಗ್ರೆಸ್ ಪಾಳಯಕ್ಕೆ ತುರ್ತಾಗಿ ಸೇರಬೇಕಿದೆ.
ಹಾಗಾಗಿ, ಸೋಮವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿಯೇ ಪಕ್ಷ ಸೇರ್ಪಡೆಯಾಗಿ ನಂತರ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.