

ತುಮಕೂರು: ಜಿಲ್ಲಾ ಸಶಸ ಮೀಸಲು ಪಡೆ ಮೈದಾನದಲ್ಲಿ 3 ದಿನಗಳಿಂದ ನಡೆದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಬುಧವಾರ ತೆರೆಬಿತ್ತು. ಜಿಲ್ಲಾ ಸಶಸ ಮೀಡಲು ಪಡೆ (ಡಿಎಆರ್) ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಲಾಭೂರಾಮ್ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು.
ಪುರುಷರ ವಿಭಾಗದಲ್ಲಿ ತುಮಕೂರು ಉಪವಿಭಾಗಛ ತಿಲಕ್ ಪಾರ್ಕ್ ಠಾಣೆಯ ಗುರುಪ್ರಸಾದ್ ಸವೋರ್ತ್ತಮ ಕ್ರೀಡಾಪಟು ಕೀರ್ತಿಗೆ ಭಾಜನರಾದರು. ಮಹಿಳಾ ವಿಭಾಗದಲ್ಲಿ ಮಧುಗಿರಿ ಉಪವಿಭಾಗದ ಪಾವಗಡ ಠಾಣೆಯ ಗೀತಾ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. 45 ವರ್ಷ ಮೇಲ್ಪಟ್ಟ ಅಧಿಕಾರಿಗಳಾ ವಿಭಾಗದಲ್ಲಿ ಎಎಸ್ಪಿ ವಿ.ಮರಿಯಪ್ಪ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡರೆ 45 ವರ್ಷ ವಯೋಮಾನದೊಳಗಿನ ಅಧಿಕಾರಿಗಳ ವಿಭಾಗದಲ್ಲಿ ಡಿಪಿಒ ಪಿಐ ಅವಿನಾಶ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡರು.
ಹಗ್ಗ ಜಗ್ಗಾಟ: ಪ್ರತಿ ವರ್ಷದಂತೆ ಕ್ರೀಡಾಕೂಟದ ಸಮಾರೋಪ ಸಂದರ್ಭದಲ್ಲಿ ಕೊನೆಯಲ್ಲಿ ನಡೆಯುವ ತೀವ್ರ ಜಿದ್ದಾಜಿದ್ದಿನ ಹಗ್ಗಾ ಜಗ್ಗಾಟವು ಮೈದಾನದಲ್ಲಿ ನೆರದಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ತೀವ್ರ ಪೈಪೋಟಿಯಲ್ಲಿ ಡಿಎಆರ್ ಪೊಲೀಸ್ ತಂಡ ಪ್ರಥಮ ಸ್ಥಾನ ಗಳಿಸಿತು. ಶಿರಾ ಉಪವಿಭಾಗ ತಂಡ ದ್ವೀತಿಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು.
ಎಸ್ಪಿ ಕೆ.ವಿ.ಅಶೋಕ್, ಎಎಸ್ಪಿ ವಿ.ಮರಿಯಪ್ಪ, ಅಬ್ದುಲ್ ಖಾದರ್, ನಗರ ಡಿವೈಎಸ್ಪಿ ಚಂದ್ರಶೇಖರ್, ಡಿಎಆರ್ ಡಿವೈಎಸ್ಪಿ ಪರಮೇಶ್ ಉಪಸ್ಥಿತರಿದ್ದರು.
ಗೀತಾ, ಗುರುಪ್ರಸಾದ್ ಚಾಂಪಿಯನ್ಗಳು
ಪುರುಷರ ವಿಭಾಗದಲ್ಲಿ ಗುರಪ್ರಸಾದ್ 800 ಮೀ., 400 ಮೀ., 1500 ಮೀಟರ್ ಓಟದ ಸ್ಪರ್ಧೆ ಹಾಗೂ ಲಾಂಗ್ ಜಂಪ್ನಲ್ಲಿ ಪ್ರಥಮಸ್ಥಾನಗಳಿಸಿ ವೈಯಕ್ತಿಕ ಚಾಂಪಿಯನ್ಶಿಪ್ ಗೆದ್ದುಕೊಂಡರು. ಮಹಿಳಾ ವಿಭಾಗದಲ್ಲಿ ಪಾವಗಡ ಠಾಣೆಯ ಗೀತಾ 100 ಮೀ., 200 ಮೀ., 400 ಮೀ., ಹಾಗೂ ಲಾಂಗ್ ಜಂಪ್ನಲ್ಲಿ ಪ್ರಥಮ ಸ್ಥಾನ, ಶಾಟ್ಪಟ್ನಲ್ಲಿ ತೃತೀಯ ಸ್ಥಾನದೊಂದಿಗೆ ವೈಯಕ್ತಿಕ ಚಾಂಪಿಯನ್ ಮುಡಿಗೇರಿಸಿಕೊಂಡರು.