

ತುಮಕೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ವಿ.ಅಶೋಕ್ ಅಧಿಕಾರವಹಿಸಿಕೊಂಡರು. ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿದ್ದ ಕೆ.ವಿ.ಅಶೋಕ್ ಸೆ.5 ರಂದು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿತ್ತು.
ನಗರದ ಜಿಲ್ಲಾ ಪೊಲೀಸ್ ಕಚೇರಿಗೆ ಗುರುವಾರ ಪತ್ನಿ , ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಪುತ್ರ ಆರ್ಯವತ್ ಕುಟುಂಬ ಸಮೇತ ಆಗಮಿಸಿದ ಕೆ.ವಿ.ಅಶೋಕ್‌ರನ್ನು ನಿರ್ಗಮಿತ ಎಸ್ಪಿ ರಾಹುಲ್‌ಕುಮಾರ್ ಶಹಾಪೂರವಾಡ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಮಧ್ಯಾಹ್ನ 12ಕ್ಕೆ ಅಶೋಕ್ ಅಧಿಕಾರ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳಿಸಿದರು.
ಜೂನ್ 10, 2021ರಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರವಹಿಸಿಕೊಂಡಿದ್ದ ರಾಹುಲ್ ಕುಮಾರ್ ಶಹಾಪೂರವಾಡ್ ಅವರು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಹುದ್ದೆಗೆ ವರ್ಗಾವಣೆ ಆಗಿದ್ದು ಆ ಸ್ಥಾನಕ್ಕೆ 2017ನೇ ಕರ್ನಾಟಕ ಐಪಿಎಸ್ ಬ್ಯಾಚ್‌ನ ಅಶೋಕ್‌ರನ್ನು ವರ್ಗಾಯಿಸಲಾಗಿದೆ.
ಆಂಧ್ರಮೂಲದ ಅಶೋಕ್ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದು ರಾಜ್ಯದ 2ನೇ ಅತಿದೊಡ್ಡ ಜಿಲ್ಲೆಯ ಜವಾಬ್ದಾರಿವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಕುಮಾರ್ ಸರ್ ಅವರ ಹಾದಿಯಲ್ಲೇ ಹೆಜ್ಜೆಯನ್ನಿಟ್ಟು ಶಾಂತಿ, ಸುವ್ಯವಸ್ಥೆ ಕಾಪಾಡುವೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಅವರ ಮಾರ್ಗದರ್ಶನ ಪಡೆಯುವೆ ಎಂದರು. ಎಎಸ್ಪಿ ವಿ.ಮರಿಯಪ್ಪ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.